ADVERTISEMENT

ಕೇಂದ್ರದ ವಿರುದ್ಧ ‘ಸುಪ್ರೀಂ’ ಮೊರೆ ಹೋದ ನಿರ್ಮೋಹಿ ಅಖಾಡ

ಅವಿವಾದಿತ ಭೂಮಿಯನ್ನು ಮೂಲ ಮಾಲೀಕರಿಗೆ ಹಿಂದಿರುಗಿಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ

ಪಿಟಿಐ
Published 9 ಏಪ್ರಿಲ್ 2019, 19:31 IST
Last Updated 9 ಏಪ್ರಿಲ್ 2019, 19:31 IST
   

ನವದೆಹಲಿ:ವಿವಾದಿತ ರಾಮಜನ್ಮಭೂಮಿ–ಬಾಬ್ರಿ ಮಸೀದಿ ಜಾಗದಲ್ಲಿ ಇರುವ ಹೆಚ್ಚುವರಿ (ವಿವಾದಿತವಲ್ಲದ) 67.390 ಎಕರೆ ಭೂಮಿಯನ್ನು ಅದರ ಮೂಲ ಮಾಲೀಕರಿಗೆ ಹಿಂದಿರುಗಿಸುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ನಿರ್ಮೋಹಿ ಅಖಾಡ ಮತ್ತೆ ಸುಪ್ರೀಂ ಕೋರ್ಟ್‌ ಮೊರೆ ಹೋಗಿದೆ.

ವಿವಾದದ ಹಿನ್ನೆಲೆಯಲ್ಲಿ ಈ ಜಾಗವನ್ನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ವಿವಾದಿತವಲ್ಲದ ಜಾಗವನ್ನು ಮೂಲ ಮಾಲೀಕರಿಗೆ ಹಿಂದಿರುಗಿಸುವ ಕುರಿತು ಕೇಂದ್ರಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

ವಿವಾದಿತ 2.77 ಎಕರೆ ವಿಸ್ತಾರದ ನಿವೇಶನವನ್ನು ಪ್ರಕರಣದ ಅರ್ಜಿದಾರರಾದ ನಿರ್ಮೋಹಿ ಅಖಾಡ, ಸುನ್ನಿ ವಕ್ಫ್‌ ಮಂಡಳಿ ಮತ್ತು ರಾಮ್‌ ಲಲ್ಲಾಗೆ ಮೂರು ಸಮಾನ ಭಾಗವಾಗಿ ನೀಡಲು 2010ರ ಅಲಹಾಬಾದ್‌ ಹೈಕೋರ್ಟ್‌ ನಿರ್ಧರಿಸಿತ್ತು.

ADVERTISEMENT

ಕರ ಸೇವಕರು 1992ರ ಡಿಸೆಂಬರ್‌ 6ರಂದು ಮಸೀದಿ ಧ್ವಂಸ ಮಾಡಿದ 0.313 ಎಕರೆ ನಿವೇಶನ, ಈ 2.77 ಎಕರೆ ಪ್ರದೇಶದಲ್ಲಿಯೇ ಇದೆ ಎಂದು ಕೇಂದ್ರಸರ್ಕಾರ ಅರ್ಜಿಯಲ್ಲಿ ತಿಳಿಸಿತ್ತು. 1993ರಲ್ಲಿಯೇ, ಕೇಂದ್ರ ಸರ್ಕಾರವು ಈ 2.77 ಎಕರೆ ವಿವಾದಿತ ಭೂಮಿಯ ಜೊತೆಗೆ 67.703 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಈ ಪ್ರದೇಶದಲ್ಲಿ 42 ಎಕರೆ ಭೂಮಿ ರಾಮ್‌ಜನ್ಮಭೂಮಿ ನ್ಯಾಸ್‌ಗೆ ಸೇರಿದೆ. ಹೀಗಾಗಿ, ಹೆಚ್ಚುವರಿ ಭೂಮಿಯನ್ನು ಮೂಲ ಮಾಲೀಕರಿಗೆ ಸಲ್ಲಿಸುವಂತೆ ರಾಮ್‌ ಜನ್ಮಭೂಮಿ ನ್ಯಾಸ್‌ ಅರ್ಜಿ ಸಲ್ಲಿಸಿತ್ತು. ಮೂಲ ಮಾಲೀಕರಿಗೆ ಭೂಮಿ ಹಿಂದಿರುಗಿಸಲು ನಮ್ಮಿಂದ ಯಾವುದೇ ಆಕ್ಷೇಪಣೆ ಇಲ್ಲ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

1994ರಲ್ಲಿ ಸರ್ಕಾರ ಈ ಜಾಗವನ್ನು ವಶಕ್ಕೆ ಪಡೆದುಕೊಂಡಾಗ ನಿರ್ಮೋಹಿ ಅಖಾಡ ನಿರ್ಮಿಸಿದ್ದ ಹಲವು ದೇವಾಲಯಗಳು ನಾಶವಾಗಿವೆ ಎಂದು ನಿರ್ಮೋಹಿ ಅಖಾಡ ಈಗಿನ ಅರ್ಜಿಯಲ್ಲಿ ಹೇಳಿದೆ. ಅಲ್ಲದೆ, ನ್ಯಾಯಾಲಯವೇ ಮಧ್ಯಸ್ಥಿಕೆ ವಹಿಸಿ ಈ ವಿವಾದವನ್ನು ಬಗೆಹರಿಸಬೇಕು ಎಂದೂ ಅಖಾಡ ಮನವಿ ಮಾಡಿದೆ.

ಈ ಪ್ರಕರಣದ ಕುರಿತು ಪರಿಹಾರ ಸೂತ್ರ ಕೈಗೊಳ್ಳಲು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಸಂಧಾನ ಸಮಿತಿ ರಚನೆ ಮಾಡಿದೆ. ಈ ಕುರಿತು ಶೀಘ್ರದಲ್ಲಿ ಸಮಿತಿಯು ವರದಿ ನೀಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.