ADVERTISEMENT

ಅಯೋಧ್ಯೆ ವಿಚಾರಣೆ: ಸಾಕ್ಷ್ಯದೊಂದಿಗೆ ಬನ್ನಿ, ಅಖಾಡಕ್ಕೆ ‘ಸುಪ್ರೀಂ’ ಸೂಚನೆ

ರಾಮಮಂದಿರ–ಬಾಬರಿ ಮಸೀದಿ ವ್ಯಾಜ್ಯದ ನಿತ್ಯ ವಿಚಾರಣೆ

ಪಿಟಿಐ
Published 7 ಆಗಸ್ಟ್ 2019, 14:24 IST
Last Updated 7 ಆಗಸ್ಟ್ 2019, 14:24 IST
   

ನವದೆಹಲಿ: ಅಯೋಧ್ಯೆಯ ವಿವಾದಿತ 2.77 ಎಕರೆ ಜಾಗದ ಮೇಲೆ ಹಕ್ಕುಸ್ವಾಮ್ಯ ಪ್ರತಿಪಾದಿಸುತ್ತಿರುವ ನಿರ್ಮೋಹಿ ಅಖಾಡವು ಸೂಕ್ತ ಸಾಕ್ಷ್ಯಗಳನ್ನು ಒದಗಿಸುವಂತೆ ಸುಪ್ರೀಂಕೋರ್ಟ್ ಬುಧವಾರ ನಿರ್ದೇಶನ ನೀಡಿತು.

ಕಂದಾಯ ದಾಖಲೆ, ಮೌಖಿಕ ಪುರಾವೆ ಅಥವಾ ಇನ್ನಿತರ ದಾಖಲೆಗಳನ್ನು ಒದಗಿಸಲು ಅಖಾಡಕ್ಕೆ ಸುಪ್ರೀಕೋರ್ಟ್ ಅವಕಾಶ ನೀಡಿದೆ. ವಿವಾದಿತ ಜಾಗ ತಮ್ಮದು ಎಂದು ಹೇಳಿಕೊಳ್ಳುವುದಕ್ಕೆ ಮೌಖಿಕ ಪುರಾವೆ ಅಥವಾ ಕಂದಾಯ ದಾಖಲೆಗಳು ಇವೆಯೇ ಎಂದು ನಿರ್ಮೋಹಿ ಅಖಾಡವನ್ನು ಕೋರ್ಟ್ ಪ್ರಶ್ನಿಸಿತು.

ಅಯೋಧ್ಯೆ ವಿಚಾರಣೆಯ ಎರಡನೇ ದಿನ ಅಖಾಡದ ಪರವಾಗಿ ಹಿರಿಯ ವಕೀಲ ಸುಶಿಲ್ ಜೈನ್ ವಾದ ಮಂಡಿಸಿದರು. ನಿರ್ಮೋಹಿ ಅಖಾಡವು ವಿವಾದಿತ ಸ್ಥಳದ ಮಾಲೀಕತ್ವದ ಹಕ್ಕು ಹಾಗೂ ನಿರ್ವಹಣೆಯ ಹಕ್ಕನ್ನು ಪ್ರತಿಪಾದಿಸುತ್ತಾ ಬಂದಿದೆ. ಜಾಗವು ರಾಮನಿಗೇ ಸೇರಿದ್ದಾಗಿದ್ದು, ಅನಾದಿ ಕಾಲದಿಂದ ತಮ್ಮ ಉಸ್ತುವಾರಿಯಲ್ಲಿದೆ ಎಂದು ಜೈನ್ ಹೇಳಿದರು.

ಜೈನ್ ಮಾತಿಗೆ ಮಧ್ಯಪ್ರವೇಶಿಸಿದ ಕೋರ್ಟ್, ‘ಸ್ವಾಧೀನದ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಜಾಗ ನಿಮ್ಮ ಸುಪರ್ದಿಯಲ್ಲಿದೆ ಎಂಬುದನ್ನು ಸಾಕ್ಷ್ಯಗಳ ಸಮೇತ ಪುಷ್ಟೀಕರಿಸಿ. ಇದಕ್ಕೆ ಸಂಬಂಧಿಸಿದ ಕಂದಾಯ ದಾಖಲೆಗಳೇನಾದರೂ ಇದ್ದರೆ, ಅದು ನಿಮ್ಮ ಪರವಾಗಿ ಅತ್ಯುತ್ತಮ ಸಾಕ್ಷ್ಯವಾಗುತ್ತದೆ. ಕಂದಾಯ ದಾಖಲೆ ಹೊರತುಪಡಿಸಿ ನಿಮ್ಮ ಹಕ್ಕು ಮಂಡಿಸಲು ಏನು ಸಾಕ್ಷ್ಯಗಳಿವೆ’ ಎಂದು ಜೈನ್ ಅವರನ್ನು ಪ್ರಶ್ನಿಸಿತು.

1982ರಲ್ಲಿ ನಡೆದ ದರೋಡೆಯಲ್ಲಿ ದಾಖಲೆಗಳನ್ನು ಕಳೆದುಕೊಂಡಿದ್ದೇವೆ ಎಂದು ಜೈನ್ ಉತ್ತರಿಸಿದರು. ದಾಖಲೆಗಳೊಂದಿಗೆ ಬನ್ನಿ ಎಂದು ಕೋರ್ಟ್ ರಾಮ್‌ಲಲ್ಲಾ ಪರ ವಕೀಲ ಪರಾಶರನ್ ಅವರಿಗೆ ವಾದ ಮಂಡಿಸಲು ಅವಕಾಶ ನೀಡಿತು.

‘ನಂಬಿಕೆಯೇ ದೊಡ್ಡ ಸಾಕ್ಷಿ’: ‘ಅಯೋಧ್ಯೆಯ ವಿವಾದಿತ ಜಾಗವೇ ರಾಮ ಜನಿಸಿದ ಸ್ಥಳ ಎಂಬುದಕ್ಕೆ ಭಕ್ತರ ದೃಢವಾದ ನಂಬಿಕೆಯೇ ದೊಡ್ಡ ಸಾಕ್ಷಿ’ ಎಂದು ಕಕ್ಷಿದಾರರಾದ ‘ರಾಮಲಲ್ಲಾ’ ಪರ ವಕೀಲ ಕೆ. ಪರಾಶರನ್ ವಾದ ಮಂಡಿಸಿದರು.

‘ರಾಮಜನ್ಮಭೂಮಿಯ ವಿಗ್ರಹವು ದೇವರ ಮೂರ್ತರೂಪ ಹಾಗೂ ಹಿಂದೂಗಳಿಗೆ ಪೂಜನೀಯ ತಾಣ. ಇಲ್ಲಿ ರಾಮ ಜನಿಸಿದ್ದ ಎಂಬುದಕ್ಕೆ ಹಲವು ಶತಮಾನಗಳ ಬಳಿಕ ಸಾಕ್ಷ್ಯ ಒದಗಿಸಿ ಎಂದರೆ ಹೇಗೆ ನೀಡಲು ಸಾಧ್ಯ’ ಎಂದು ಪರಾಶರನ್ ಅವರು ಕೋರ್ಟ್‌ಗೆ ಕೇಳಿದರು.

ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠದಲ್ಲಿ ನಿತ್ಯವೂ ವಿಚಾರಣೆ ನಡೆಯುತ್ತಿದೆ. ಅಯೋಧ್ಯೆಯಲ್ಲಿ ರಾಮ ಜನಿಸಿದ್ದ ಎಂಬುದಕ್ಕೆ ವಾಲ್ಮೀಕಿ ರಾಮಾಯಣವು ಮೂರು ಸ್ಥಳಗಳನ್ನು ಉಲ್ಲೇಖಿಸಿದೆ ಎಂದು ಹಿರಿಯ ವಕೀಲ ಹೇಳಿದರು.

ರಾಮನ ರೀತಿಯ ಧಾರ್ಮಿಕ ವ್ಯಕ್ತಿಯ ಹುಟ್ಟಿನ ಬಗ್ಗೆ ಯಾವುದಾದರೂ ನ್ಯಾಯಾಲಯದಲ್ಲಿ ಪ್ರಶ್ನೆ ಎದ್ದಿದ್ದೆಯೇ ಎಂದು ಕೋರ್ಟ್ ಪ್ರಶ್ನಿಸಿತು. ‘ಬೆತ್ಲಹೇಮ್‌ನಲ್ಲಿ ಕ್ರಿಸ್ತನ ಜನನದ ಬಗ್ಗೆ ಯಾರಾದರೂ ಪ್ರಶ್ನೆ ಎತ್ತಿ, ಜಗತ್ತಿನ ಯಾವುದಾದರೂ ಕೋರ್ಟ್‌ನಲ್ಲಿ ವಿಚಾರಣೆಯೇನಾದರೂ ನಡೆದಿದೆಯೇ‘ ಎಂದು ಕೋರ್ಟ್ ಪ್ರಶ್ನಿಸಿತು. ಇದನ್ನು ಪರಿಶೀಲಿಸಿ ಮಾಹಿತಿ ನೀಡುವುದಾಗಿ ಪರಾಶರನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.