
ಲಖನೌ/ ಅಯೋಧ್ಯೆ : ಈ ವರ್ಷ ಜನವರಿ ತಿಂಗಳಿನಿಂದ ಜೂನ್‌ವರೆಗೆ ಅಯೋಧ್ಯೆಗೆ 23.82 ಕೋಟಿ ಭಕ್ತರು ಭೇಟಿ ನೀಡಿದ್ದಾರೆ. ದೀಪೋತ್ಸವದ ಅಂಗವಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ನಗರಕ್ಕೆ ಬರುತ್ತಿದ್ದಾರೆ.
ಭಾನುವಾರ ನಡೆದ ದೀಪೋತ್ಸವದಲ್ಲಿ 26 ಲಕ್ಷಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದಾರೆ.
‘ಅಯೋಧ್ಯೆಯ ದೀಪೋತ್ಸವ ಕಾರ್ಯಕ್ರಮವು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನಸೆಳೆದಿದೆ. ಹೀಗಾಗಿ, ನಗರಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆಯಲ್ಲಿ ನಿಧಾನವಾಗಿ ಏರಿಕೆಯಾಗುತ್ತಿದೆ. ದೇಶದ ಭಕ್ತರ ಸಂಖ್ಯೆಯೇ ದೊಡ್ಡ ಸಂಖ್ಯೆಯಲ್ಲಿದ್ದು, ವಿದೇಶಿಗರ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ’ ಎಂದು ಉತ್ತರಪ್ರದೇಶ ಸರ್ಕಾರವು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ದೀಪೋತ್ಸವದ ವೇಳೆ ಪ್ರವಾಸಿಗರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ ಎಂದು ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯು ಬಿಡುಗಡೆಗೊಳಿಸಿದ ಅಂಕಿಅಂಶಗಳಿಂದ ತಿಳಿದುಬಂದಿದೆ. ಜನವರಿಯಿಂದ ಜೂನ್ ಅವಧಿಯಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆಯೇ 50 ಸಾವಿರದಷ್ಟು ಏರಿಕೆಯಾಗಿದೆ.
‘ನಗರಕ್ಕೆ ಸಂಪರ್ಕ ಕಲ್ಪಿಸಲು ನಾಲ್ಕು ಹಾಗೂ ಆರು ಪಥಗಳ ಹೆದ್ದಾರಿ, ವಿಶ್ವದರ್ಜೆಯ ವಿಮಾನ ನಿಲ್ದಾಣ, ಆಧುನಿಕ ರೈಲ್ವೆ ನಿಲ್ದಾಣದಿಂದ ಅಯೋಧ್ಯೆಯು ಆಧ್ಯಾತ್ಮಿಕ ಪುನರುಜ್ಜೀವನದ ಜೊತೆಗೆ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ’ ಎಂದು ಉತ್ತರ ಪ್ರದೇಶ ಸರ್ಕಾರವು ಬಿಡುಗಡೆಗೊಳಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಘಾಟ್‌ಗಳಿಗೆ ಗರಿಷ್ಠ ಭದ್ರತೆ ಕೈಗೊಳ್ಳಲಾಗಿದ್ದು, ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಐತಿಹಾಸಿಕ ದೀಪೋತ್ಸವ ಕಾರ್ಯಕ್ರಮಕ್ಕೆ ಡಾ.ರಾಮ್ ಮನೋಹರ್ ಲೋಹಿಯಾ ಅವಧ್ ವಿಶ್ವವಿದ್ಯಾಲಯ ಹಾಗೂ ಅಯೋಧ್ಯೆ ಜಿಲ್ಲಾಡಳಿತದ ಸಹಯೋಗದಲ್ಲಿ ಸಿದ್ಧತೆಗಳು ಆರಂಭಗೊಂಡಿವೆ.
‘33 ಸಾವಿರ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ದುಡಿಯಲಿದ್ದು, 26 ಲಕ್ಷ ದೀಪ ಉರಿಸುವ ಮೂಲಕ ವಿಶ್ವದಾಖಲೆ ನಿರ್ಮಾಣ ಮಾಡಲಾಗುತ್ತದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ದೀಪೋತ್ಸವ ಕಾರ್ಯಕ್ರಮವು ಅಸಾಧಾರಣವಾದುದು. ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯಿಂದ ಸಮಾನತೆ ಹಾಗೂ ಸಾಮರಸ್ಯದ ಸಂದೇಶವು ಇಡೀ ಜಗತ್ತಿಗೆ ತಲುಪಲಿದೆ’ ಎಂದು ವಿಶ್ವವಿದ್ಯಾಲಯದ ಕುಲಪತಿ ಬಿಜೇಂದ್ರ ಸಿಂಗ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ಸರಯೂ ನದಿ ತಟದಲ್ಲಿರುವ 56 ಘಾಟ್‌ಗಳಲ್ಲಿ ವಿಶ್ವವಿದ್ಯಾಲಯದ 2 ಸಾವಿರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಘಾಟ್‌ನಲ್ಲಿ ಉರಿಸಲಿರುವ 28 ಲಕ್ಷ ದೀಪಗಳನ್ನು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನ ತಂಡವು ಲೆಕ್ಕ ಹಾಕಲಿದ್ದು, ಈಗಾಗಲೇ ಎಲ್ಲವನ್ನೂ ಸಿದ್ಧಪಡಿಸಲಾಗಿದೆ’ ಎಂದು ದೀಪೋತ್ಸವದ ನೋಡಲ್ ಅಧಿಕಾರಿ ಸಂತ್ ಶರಣ್ ಮಿಶ್ರಾ ತಿಳಿಸಿದ್ದಾರೆ.
‘10ನೇ ಘಾಟ್‌ನಲ್ಲಿ 80 ಸಾವಿರ ದೀಪಗಳನ್ನು ಬಳಸಿ, ವಿಶ್ವವಿದ್ಯಾಲಯದ ಸ್ವಯಂಸೇವಕರು ಅತಿ ದೊಡ್ದದಾದ ‘ಸ್ವಸ್ಥಿಕಾ’ ರಚಿಸಿ, ಶುಭ ಸಂದೇಶ ರವಾನಿಸಿದ್ದಾರೆ’ ಎಂದು ಹೇಳಿದ್ದಾರೆ.
ಘಾಟ್‌ಗಳಿಗೆ ಗರಿಷ್ಠ ಭದ್ರತೆ ಕೈಗೊಳ್ಳಲಾಗಿದ್ದು, ಗುರುತಿನ ಚೀಟಿ ಇಲ್ಲದವರಿಗೆ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಭಾನುವಾರ ಸಂಜೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಾರ್ಯಕ್ರಮದ ಬಳಿಕ ‘ರಾಮ್ ಕಿ ಪೈದಿ’ಯಲ್ಲಿ ರಾತ್ರಿ 8.30ರಿಂದ ಲೇಸರ್ ಶೋ, ಡ್ರೋನ್ ಶೋ ನಡೆಯಿತು’ ಎಂದು ಅಯೋಧ್ಯೆ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿಖಿಲ್ ಟೀಕಾರಾಮ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.