ADVERTISEMENT

ಅಯೋಧ್ಯೆಯಲ್ಲಿ ಮಸೀದಿಗೆ ಭೂಮಿ: ಸರ್ಕಾರಕ್ಕೆ ಇಕ್ಕಟ್ಟು

ಜನ್ಮಭೂಮಿ ಸಂಕೀರ್ಣದಲ್ಲಿ ಜಮೀನಿಗೆ ಮುಸ್ಲಿಮರ ಬೇಡಿಕೆ

ಸಂಜಯ ಪಾಂಡೆ
Published 13 ನವೆಂಬರ್ 2019, 1:49 IST
Last Updated 13 ನವೆಂಬರ್ 2019, 1:49 IST
   

ಲಖನೌ: ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕಾಗಿ ಮುಸ್ಲಿಮರಿಗೆ ಐದು ಎಕರೆ ಜಮೀನು ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ ತೀರ್ಪು, ಉತ್ತರ ಪ್ರದೇಶ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಯೋಧ್ಯೆ ನಗರ ವ್ಯಾಪ್ತಿಯಲ್ಲಿ ಐದು ಎಕರೆ ಖಾಲಿ ಜಮೀನು ಇಲ್ಲ ಎಂಬುದು ರಾಜ್ಯ ಸರ್ಕಾರದ ಮೊದಲ ಸಮಸ್ಯೆಯಾಗಿದೆ.

ಜತೆಗೆ, ರಾಮಜನ್ಮಭೂಮಿ ಸಂಕೀರ್ಣದಲ್ಲಿಯೇ ಮಸೀದಿಗೆ ಜಮೀನು ನೀಡಬೇಕು ಎಂದು ರಾಮಜನ್ಮಭೂಮಿ–ಬಾಬರಿ ಮಸೀದಿ ವಿವಾದದ ಕಕ್ಷಿದಾರರಲ್ಲಿ ಒಬ್ಬರಾದ ಇಕ್ಬಾಲ್‌ ಅನ್ಸಾರಿ ಬೇಡಿಕೆ ಮುಂದಿಟ್ಟಿದ್ದಾರೆ. ಇದು ಇನ್ನೊಂದು ಸಮಸ್ಯೆ ಸೃಷ್ಟಿಸಿದೆ.

ತಾತ್ಕಾಲಿಕ ರಾಮ ಮಂದಿರ ಇರುವ ಸ್ಥಳದ ಸುತ್ತಲಿನ 67 ಎಕರೆ ಜಮೀನು ಸರ್ಕಾರದ ವಶದಲ್ಲಿದೆ. ಇಲ್ಲಿಯೇ ಐದು ಎಕರೆ ಜಮೀನು ಕೊಡಬೇಕು ಎಂಬುದು ಅನ್ಸಾರಿ ಅವರ ಬೇಡಿಕೆ. ಬಾಬರಿ ಮಸೀದಿ ಧ್ವಂಸದ ಬಳಿಕ ಇಲ್ಲಿನ 67 ಎಕರೆ ಜಮೀನನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದಿತ್ತು. ಇದನ್ನು ರಾಮಜನ್ಮಭೂಮಿ ಸಂಕೀರ್ಣ ಎಂದು ಕರೆಯಲಾಗುತ್ತಿದೆ.

ADVERTISEMENT

ಈ ಸಂಕೀರ್ಣದಲ್ಲಿ ಒಂದು ಭಾಗವನ್ನು ಮುಸ್ಲಿಮರಿಗೆ ನೀಡುವುದಕ್ಕೆ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ವಿರೋಧ ವ್ಯಕ್ತಪಡಿಸಿದೆ. ‘14 ಕೋಸಿ ಪರಿಕ್ರಮ‍’ ಪ್ರದೇಶದಿಂದ ಹೊರಗೆ ಮಸೀದಿ ನಿರ್ಮಿಸಬೇಕು ಎಂಬುದು ವಿಎಚ್‌ಪಿಯ ಒತ್ತಾಯ. ಪ್ರಮುಖ ಧಾರ್ಮಿಕ ದಿನಗಳಂದು ಭಕ್ತರು 14 ಕೋಸಿ ಪರಿಕ್ರಮ ನಡೆಸುತ್ತಾರೆ. ಇದು ಅಯೋಧ್ಯೆಯನ್ನು ಕೇಂದ್ರವಾಗಿರಿಸಿಕೊಂಡಿರುವ 42 ಕಿ.ಮೀ. ಪ್ರದೇಶ.

ಮುಸ್ಲಿಮರಿಗೆ ನೀಡುವುದಕ್ಕಾಗಿ ನಗರ ಮಿತಿಯೊಳಗೆ ಐದು ಎಕರೆ ಜಮೀನು ಗುರುತಿಸಲು ಈವರೆಗೆ ಸಾಧ್ಯವಾಗಿಲ್ಲ. ಹಾಗಾಗಿ, ಸುತ್ತಲಿನ ಗ್ರಾಮಗಳಲ್ಲಿ ಮಸೀದಿ ನಿರ್ಮಾಣಕ್ಕೆ ಸೂಕ್ತವಾದ ಜಮೀನು ಇದೆಯೇ ಎಂಬುದನ್ನು ಪತ್ತೆ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ರಾಮಜನ್ಮಭೂಮಿ ಸಂಕೀರ್ಣದಲ್ಲಿಯೇ ಜಮೀನು ನೀಡಬೇಕು ಎಂಬ ವಿಚಾರವು ಹಿಂದೂ–ಮುಸ್ಲಿಮರ ನಡುವೆ ಇನ್ನೊಂದು ಸುತ್ತಿನ ಸಂಘರ್ಷಕ್ಕೆ ಕಾರಣವಾಗುವ ಸಾಧ್ಯತೆ ಇದೆ.

ಈಗಲೂ ಕಟ್ಟೆಚ್ಚರ

ಅಯೋಧ್ಯೆ ತೀರ್ಪಿಗೆ ಸಂಬಂಧಿಸಿ ವದಂತಿ ಹರಡುವುದನ್ನು ತಡೆಯುವ ಪ್ರಯತ್ನ ಈಗಲೂ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ಉತ್ತರ ಪ್ರದೇಶ ಡಿಜಿಪಿ ಒ.ಪಿ. ಸಿಂಗ್‌ ಹೇಳಿದ್ದಾರೆ. ವದಂತಿ ಹರಡಲು ಯತ್ನಿಸಿದ್ದ 70ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೆ 270ಕ್ಕೂ ಹೆಚ್ಚು ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಯೋಧ್ಯೆ ತೀರ್ಪಿನ ಬಳಿಕ ಉತ್ತರ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹಾಗಿದ್ದರೂ ಕಟ್ಟೆಚ್ಚರ ಮುಂದುವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.