ADVERTISEMENT

ಹಿಂದಿ ಬಾರದವರು ಮೀಟಿಂಗ್‌ನಿಂದ ಹೊರಹೋಗಿ: ವಿವಾದ ಹುಟ್ಟುಹಾಕಿದ ಆಯುಷ್ ಕಾರ್ಯದರ್ಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಆಗಸ್ಟ್ 2020, 12:26 IST
Last Updated 22 ಆಗಸ್ಟ್ 2020, 12:26 IST
ಆಯುಷ್ ಇಲಾಖೆ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ
ಆಯುಷ್ ಇಲಾಖೆ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ   

ಆಯುಷ್ ಇಲಾಖೆ ಆಯೋಜಿಸಿದ್ದ ವರ್ಚುವಲ್ ತರಬೇತಿ ಕಾರ್ಯಕ್ರಮದಲ್ಲಿ ಇಲಾಖೆಯ ಕಾರ್ಯದರ್ಶಿ ವೈದ್ಯ ರಾಜೇಶ್‌ ಕೊಟೆಚಾ 'ಹಿಂದಿ ಮಾತನಾಡಲು ಆಗದವರು ತರಬೇತಿಯಿಂದ ಹೊರನಡೆಯಬಹುದು. ನನಗೆ ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ' ಎಂದು ಹೇಳಿರುವುದು ವಿವಾದ ಹುಟ್ಟುಹಾಕಿದೆ.

ತಮಿಳುನಾಡಿನ ರಾಜಕಾರಿಣಿಗಳು ಆಯುಷ್ ಕಾರ್ಯದರ್ಶಿಯ ಹೇಳಿಕೆಯನ್ನು'ಇದುಹಿಂದಿ ಹೇರಿಕೆ ಮನಸ್ಥಿತಿ ಇರುವವರ ಕರಾಳಮುಖವನ್ನು ತೋರಿಸುತ್ತದೆ'ಖಂಡಿಸಿದ್ದಾರೆ.

'ಕೋಟೆಚಾ ಅವರನ್ನು ತಕ್ಷಣ ಅಮಾನತು ಮಾಡಬೇಕು. ಶಿಸ್ತುಕ್ರಮ ಜರುಗಿಸಬೇಕು' ಎಂದುಡಿಎಂಕೆ ಸಂಸದೆ ಕನಿಮೋಳಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, 'ಇದು ಹಿಂದಿಹೇರಿಕೆಯ ಬಗ್ಗೆ ಸಾಕಷ್ಟು ತಿಳಿಸುತ್ತದೆ. ಇದು ಖಂಡನಾರ್ಹ. ಇನ್ನೂ ಎಷ್ಟು ದಿನಗಳ ಕಾಲ ಹಿಂದಿ ಬಾರದವರನ್ನು ಹೊರಗಿಸುವ ಮನಸ್ಥಿತಿಯನ್ನು ಸಹಿಸಿಕೊಳ್ಳಬೇಕು' ಎಂದು ಕಿಡಿಕಾರಿದ್ದಾರೆ.

ADVERTISEMENT

'ಹಿಂದಿ ಬಾರದ ತಮಿಳುನಾಡು ಪ್ರತಿನಿಧಿಗಳನ್ನು ಆಯುಷ್ ತರಬೇತಿ ಕಾರ್ಯಾಗಾರವು ನಿರ್ಲಕ್ಷಿಸಿದೆ. ಅವರಿಗೆ ಹಿಂದಿ ಬರುವುದಿಲ್ಲ ಎನ್ನುವುದನ್ನು ನಾವು ಅರ್ಥ ಮಾಡಿಕೊಳ್ಳಬಹುದು. ಆದರೆ ಹಿಂದಿ ಬಾರದವರು ಕಾರ್ಯಾಗಾರದಿಂದ ಹೊರನಡೆಯಬೇಕು ಎಂದು ಹೇಳುವುದಾಗಲೀ ಅಥವಾ ಹಿಂದಿಯಲ್ಲಿಯೇ ಮಾತನಾಡಬೇಕು ಎಂದು ಆಗ್ರಹಿಸುವುದನ್ನಾಗಲೀ ಒಪ್ಪಲು ಸಾಧ್ಯವಿಲ್ಲ' ಎಂದು ಸಂಸದ ಕಾರ್ತಿ ಚಿದಂಬರಂ ಟ್ವೀಟ್‌ ಮಾಡಿದ್ದಾರೆ.

'ತಮಿಳು ಅಥವಾ ಇಂಗ್ಲಿಷ್‌ನಲ್ಲಿ ಮಾತನಾಡಿ' ಎಂದು ಹೇಳಿದ್ದ ಕನಿಮೋಳಿ ಅವರಿಗೆಈ ತಿಂಗಳ ಆರಂಭದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಅಧಿಕಾರಿಯೊಬ್ಬರು 'ನೀವು ಭಾರತೀಯರೇ?' ಎಂದು ಪ್ರಶ್ನಿಸಿದ್ದರು. ಈ ಪ್ರಕರಣದ ನಂತರ ಸಿಐಎಸ್‌ಎಫ್ ವಿಚಾರಣೆಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.