ADVERTISEMENT

ಪಿಣರಾಯಿ ಸರ್ಕಾರದ 'ವನಿತಾ ಮದಿಲ್' ವಿರುದ್ಧ ಕೇರಳದಾದ್ಯಂತ 'ಅಯ್ಯಪ್ಪ ಜ್ಯೋತಿ'

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 6:10 IST
Last Updated 26 ಡಿಸೆಂಬರ್ 2018, 6:10 IST
   

ತಿರುವನಂತಪುರಂ: ಶಬರಿಮಲೆಯ ನಂಬಿಕೆ ಸಂಪ್ರದಾಯಗಳನ್ನು ಕಾಪಾಡಬೇಕು ಎಂದು ಒತ್ತಾಯಿಸಿ ಶಬರಿಮಲೆ ಕರ್ಮ ಸಮಿತಿಯ ನೇತೃತ್ವದಲ್ಲಿ ಇಂದು ಕೇರಳ ರಾಜ್ಯದಾದ್ಯಂತ ಅಯ್ಯಪ್ಪ ಜ್ಯೋತಿ ಬೆಳಗಿಸಲಾಗುವುದು.ಬಿಜೆಪಿ ಮತ್ತು ಎನ್ಎಸ್ಎಸ್ ಬೆಂಬಲದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ 10 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಭಾಗವಹಿಸಲಿದ್ದಾರೆ ಎಂದು ಆಯೋಜಕರು ಹೇಳಿದ್ದಾರೆ.

ಪಿಣರಾಯಿ ವಿಜಯನ್ ನೇತೃತ್ವದ ಸರ್ಕಾರ ಜನವರಿ 1 ನೇ ತಾರೀಖಿಗೆ 'ವನಿತಾ ಮದಿಲ್' ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದೆ.ಈ ಕಾರ್ಯಕ್ರಮದ ವಿರುದ್ಧ ಶಬರಿಮಲೆ ಕರ್ಮ ಸಮಿತಿ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ಆಯೋಜಿಸಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರದಿಂದ ಶುರುವಾಗಿ ಕಳಿಯಿಕ್ಕಾವಿಳ (ತಿರುವನಂತಪುರಂ-ತಮಿಳುನಾಡಿನ ಗಡಿ ಪ್ರದೇಶದಲ್ಲಿರುವ ಊರು) ವರೆಗೆ ಅಯ್ಯಪ್ಪ ಜ್ಯೋತಿ ಬೆಳಗಿಸಲಾಗುವುದು.

ಶಬರಿಮಲೆಗೆ ಮಹಿಳೆಯರನ್ನು ಪ್ರವೇಶಿಸುವ ಸರ್ಕಾರದ ನಿಲುವಿನ ವಿರುದ್ಧ ಶಬರಿಮಲೆ ಕರ್ಮ ಸಮಿತಿ ಪ್ರತಿಭಟನೆ ನಡೆಸುತ್ತಾ ಬಂದಿದೆ. ನವೋತ್ಥಾನ ಮೌಲ್ಯಗಳ ರಕ್ಷಣೆಗಾಗಿ ಸರ್ಕಾರ ವನಿತಾ ಮದಿಲ್ ಕಾರ್ಯಕ್ರಮ ಆಯೋಜಿಸುವುದಾಗಿ ಘೋಷಿಸಿದ ಬೆನ್ನಲೇ ಅಯ್ಯಪ್ಪ ಜ್ಯೋತಿ ಬೆಳಗಿಸುವುದಾಗಿ ಕರ್ಮ ಸಮಿತಿ ಘೋಷಿಸಿತ್ತು. ಈ ಕಾರ್ಯಕ್ರಮಕ್ಕೆ ಬಿಜೆಪಿ ಬೆಂಬಲ ಸೂಚಿಸಿತ್ತು.
ಕಾಸರಗೋಡಿನಹೊಸಂಗಡಿ ಶ್ರೀ ಧರ್ಮಶಾಸ್ತಾ ಕ್ಷೇತ್ರದಿಂದ ಆರಂಭವಾಗಿ ಕಿಳಿಯಿಕ್ಕಾವಿಳದಿಂದ ತಮಿಳುನಾಡಿಗೆ ಅಯ್ಯಪ್ಪಜ್ಯೋತಿ ಪಸರಿಸುವಂತೆ ಕಾರ್ಯ ಯೋಜನೆ ಮಾಡಲಾಗಿದೆ.ಅಂಗಮಾಲಿವರೆಗೆ ರಾಷ್ಟ್ರೀಯಹೆದ್ದಾರಿ ಮೂಲಕವೂ ಅದರ ನಂತರ ಎಂಸಿ ರಸ್ತೆಯಲ್ಲಿ ಜ್ಯೋತಿ ಬೆಳಗಿಸಲಾಗುವುದು.

ADVERTISEMENT

ಸಂಜೆ 5 ಗಂಟೆಗೆ ಸಾರ್ವಜನಿಕ ಸಭೆ ನಂತರ ದೀಪ ಹಚ್ಚುವ ಕಾರ್ಯಕ್ರಮ ಶುರುವಾಗಲಿದೆ. ಕೊಳತ್ತೂರ್ ಅದ್ವೈತಾಶ್ರಮದ ಸ್ವಾಮಿ ಚಿದಾನಂದಪುರಿ ಅವರ ಅಯ್ಯಪ್ಪ ಜ್ಯೋತಿ ಸಂದೇಶ ಈ ಸಭೆಯಲ್ಲಿರಲಿದೆ.ಸಂಜೆ ಆರು ಗಂಟೆಗೆ ದೀಪ ಹಚ್ಚಲಾಗುವುದು.6.30ಕ್ಕೆ ಅಯ್ಯಪ್ಪ ಜ್ಯೋತಿ ಮುಕ್ತಾಯವಾಗಲಿದೆ.ಪಿಎಸ್‍ಸಿ ಮಾಜಿ ಮುಖ್ಯಸ್ಥ ಕೆ.ಎಸ್. ರಾಧಾಕೃಷ್ಣನ್,ಮಾಜಿ ಡಿಜಿಪಿ ಟಿ.ಪಿ ಜೆನ್ ಕುಮಾರ್ ಮೊದಲಾದವರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಲಯಾಳ ಮನೋರಮಾ ಪತ್ರಿಕೆ ವರದಿ ಮಾಡಿದೆ.ತಮಿಳುನಾಡಿನ 69 ದೇವಾಲಯಗಳಲ್ಲಿ ಜ್ಯೋತಿ ಬೆಳಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.