ADVERTISEMENT

Independence Day 2022: ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣದ ಮುಖ್ಯಾಂಶಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಆಗಸ್ಟ್ 2022, 14:33 IST
Last Updated 14 ಆಗಸ್ಟ್ 2022, 14:33 IST
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು   

ನವದೆಹಲಿ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಭಾನುವಾರ ರಾಷ್ಟ್ರವನ್ನುಉದ್ದೇಶಿಸಿ ಭಾಷಣ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶದ ಆರ್ಥಿಕತೆ ಕ್ಷಿಪ್ರ ಗತಿಯಲ್ಲಿ ಪ್ರಗತಿ ಕಾಣುತ್ತಿದೆ ಎಂದು ಶ್ಲಾಘಿಸಿದ್ದಾರೆ.

ದೇಶದೆಲ್ಲೆಡೆ ನಾಳೆ (ಆಗಸ್ಟ್ 15) 75ನೇ ಸ್ವಾತಂತ್ರೋತ್ಸವ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಇದರಂತೆ ಮುನ್ನಾದಿನ ರಾಷ್ಟ್ರಪತಿ ದ್ರೌಪದಿ ಮುರ್ಮು ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ.

ಮುಖ್ಯಾಂಶಗಳು:

ಸ್ವಾತಂತ್ರ್ಯ ದಿನವನ್ನು ಆಚರಿಸುವಾಗ ನಾವು 'ಭಾರತೀಯತೆ'ಯನ್ನು ಆಚರಿಸುತ್ತೇವೆ. ಭಾರತವು ವೈವಿಧ್ಯತೆಯಿಂದ ಕೂಡಿದೆ. 'ಏಕ ಭಾರತ, ಶ್ರೇಷ್ಠ ಭಾರತ' ಎಂಬ ಪರಿಕಲ್ಪನೆಯು ಒಗ್ಗಾಟ್ಟಾಗಿ ಮುಂದೆ ಸಾಗಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

76ನೇ ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ ವಸಾಹತುಶಾಹಿ ಆಡಳಿತದಿಂದ ದೇಶವನ್ನು ಮುಕ್ತಗೊಳಿಸಿದ ಸ್ವಾತಂತ್ರ್ಯ ಹೋರಾಟಗಾರರ ಅಪಾರ ತ್ಯಾಗವನ್ನು ದ್ರೌಪದಿ ಮುರ್ಮು ಸ್ಮರಿಸಿದರು.

ಕೋವಿಡ್ ಸಂಕಷ್ಟದ ಬಳಿಕ ಭಾರತವು ಶಿಪ್ರ ಗತಿಯಲ್ಲಿ ಪ್ರಗತಿ ಸಾಧಿಸುತ್ತಿರುವುದನ್ನು ಜಗತ್ತು ಗಮನಿಸುತ್ತಿದೆ. ಪ್ರಾದೇಶಿಕ ಅಸಮಾನತೆ ಕಡಿಮೆಯಾಗುತ್ತಿದೆ. ಸಂಕಷ್ಟದ ಸಮಯದಲ್ಲೂ ದೇಶದ ಏಳಿಗೆಗಾಗಿ ಪ್ರಯತ್ನ ಮಾಡಿದ್ದಕ್ಕಾಗಿ ಸರ್ಕಾರ ಮನ್ನಣೆಗೆ ಅರ್ಹವಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಸಂಕಷ್ಟದ ನಡುವೆ ಇತಿಹಾಸದಲ್ಲೇ ಅತಿದೊಡ್ಡ ಲಸಿಕೆ ಅಭಿಯಾನವನ್ನು ಪ್ರಾರಂಭಿಸಿದ್ದೇವೆ.200 ಕೋಟಿ ಡೋಸ್‌ಗಳ ಒಟ್ಟು ಲಸಿಕೆ ವ್ಯಾಪ್ತಿಯನ್ನು ದಾಟಿದ್ದೇವೆ ಎಂದು ಉಲ್ಲೇಖಿಸಿದರು.

ಲಿಂಗ ಅಸಮಾನತೆ ಕಡಿಮೆಯಾಗುತ್ತಿದೆ. ಹೆಣ್ಣು ಮಕ್ಕಳು ದೇಶದ ಭವಿಷ್ಯದ ದೊಡ್ಡ ಭರವಸೆಯಾಗಿದ್ದಾರೆ ಎಂದು ಹೇಳಿದ್ದಾರೆ.

ಪ್ರಜಾಪ್ರಭುತ್ವದ ನೈಜ ಸಾಮರ್ಥ್ಯವನ್ನು ಕಂಡುಹಿಡಿಯಲು ಜಗತ್ತಿಗೆ ಸಹಾಯ ಮಾಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ. ಪ್ರಜಾಪ್ರಭುತ್ವವು ದೇಶದ ಮಣ್ಣಿನಲ್ಲಿ ಆಳವಾಗಿ ಬೇರೂರಿದ್ದು, ಶ್ರೀಮಂತವಾಗಿದೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಮುಂದಿನ ಹಂತದ ಕೈಗಾರಿಕಾ ಕ್ರಾಂತಿಗೆ ಭವಿಷ್ಯದ ಪೀಳಿಗೆಯನ್ನು ಸಿದ್ಧಪಡಿಸುವ ಗುರಿಯನ್ನು ಹೊಂದಿದ್ದು, ದೇಶದ ಪರಂಪರೆಯೊಂದಿಗೆ ಮರು ಸಂಪರ್ಕಿಸುತ್ತದೆ ಎಂದು ಹೇಳಿದರು.

ಅನೇಕ ವೀರರು ಹಾಗೂ ಅವರ ಹೋರಾಟವನ್ನು ಮರೆತು ಬಿಟ್ಟಿದ್ದೇವೆ. ವಿಶೇಷವಾಗಿಯೂ ಬುಡಕಟ್ಟು ಜನಾಂಗದ ನಾಯಕರು ಪ್ರಾದೇಶಿಕ ಐಕಾನ್‌ಗಳಾಗಿದ್ದಾರೆ. ನವೆಂಬರ್ 15 ಅನ್ನು 'ಜನಜಾತಿಯ ಗೌರವ ದಿವಸ'ವಾಗಿ ಆಚರಿಸಲು ಸರ್ಕಾರ ನಿರ್ಧರಿಸಿರುವುದು ಸ್ವಾಗತಾರ್ಹವಾಗಿದೆ ಎಂದು ಹೇಳಿದ್ದಾರೆ.


2047ರ ವೇಳೆಗೆ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳನ್ನು ಸಂಪೂರ್ಣವಾಗಿ ಸಾಕಾರಗೊಳಿಸುತ್ತೇವೆ. ಈಗಾಗಲೇ ʻಆತ್ಮನಿರ್ಭರ ಭಾರತʼ ನಿರ್ಮಿಸುವ ಹಾದಿಯಲ್ಲಿದ್ದೇವೆ ಎಂದು ಹೇಳಿದರು.

ದ್ರೌಪರ್ದಿ ಮುರ್ಮು ಭಾಷಣ ಇಲ್ಲಿ ನೋಡಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.