ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಆಜಂ ಖಾನ್ ನಡುವಣ ಮನಸ್ತಾಪ ಮತ್ತಷ್ಟು ಹೆಚ್ಚಾಗಿದೆ ಎಂದು ವರದಿಯಾಗಿದೆ.
ಆಜಂ ಖಾನ್ ಎರಡು ದಿನಗಳ ಲಖನೌ ಭೇಟಿಯಲ್ಲಿದ್ದು, ಅಖಿಲೇಶ್ ಯಾದವ್ ಅವರನ್ನು ಭೇಟಿಯಾಗದೆ, ಮತ್ತೊಬ್ಬ ಭಿನ್ನಮತೀಯ ನಾಯಕ ಶಿವಪಾಲ್ ಯಾದವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ವಿಧಾನಸಭೆಗೆ ತೆರಳಿ ಸ್ಪೀಕರ್ ಸತೀಶ್ ಮಹನ್ ಅವರ ಕೊಠಡಿಯಲ್ಲಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಆಜಂ ಖಾನ್, ಬಳಿಕ ಅಖಲೇಶ್ ಅವರನ್ನು ಭೇಟಿಯಾಗಲಿಲ್ಲ. ಅಖಿಲೇಶ್ ಸಹ ಆಜಂ ಖಾನ್ ಅವರನ್ನು ಭೇಟಿಯಾಗುವ ಒಲವು ತೋರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.
ಎರಡೂ ದಿನ ಶಿವಪಾಲ್ ಯಾದವ್ ಅವರ ಜತೆ ಆಜಂ ಖಾನ್ ರಹಸ್ಯ ಮಾತುಕತೆ ನಡೆಸಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ಅಧ್ಯಕ್ಷ ಮುಲಾಯಂ ಸಿಂಗ್ ಯಾದವ್ ಅವರನ್ನೂ ಭೇಟಿಯಾಗಿಲ್ಲ.
ಈ ಕುರಿತು ಪ್ರತಿಕ್ರಿಯೆ ನೀಡಿದ ಖಾನ್, ‘ನಾನು ಚಿಕ್ಕವ. ಯಾರಾದರೂ ನನ್ನನ್ನು ಭೇಟಿ ಮಾಡಲು ಬಂದರೆ ನಾನು ಕೃತಜ್ಞನಾಗಿದ್ದೇನೆ. ದೊಡ್ಡ ನಾಯಕರು ನನ್ನನ್ನು ಏಕೆ ಭೇಟಿ ಮಾಡಬೇಕು? ಬಹುಶಃ ಅವರ ಬಳಿ ನನ್ನ ದೂರವಾಣಿ ಸಂಖ್ಯೆ ಇಲ್ಲದಿರಬಹುದು’ ಎಂದು ಹೇಳಿದ್ದಾರೆ.
ಮೂಲಗಳ ಪ್ರಕಾರ, ಆಜಂ ಖಾನ್ ಹಾಗೂ ಶಿವಪಾಲ್ ಯಾದವ್ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಸುಮಾರು 87 ಪ್ರಕರಣಗಳಿಗೆ ಸಂಬಂಧಿಸಿ ಬಂಧಿತರಾಗಿದ್ದ ಆಜಂ ಖಾನ್ ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಜೈಲಿನಿಂದ ಬಿಡುಗಡೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.