ನವದೆಹಲಿ: ‘2024ರಲ್ಲಿ ಮೈಸೂರು– ದರ್ಭಾಂಗ ‘ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು ಅಪಘಾತವು ವಿಧ್ವಂಸಕ ಕೃತ್ಯವಾಗಿತ್ತು’ ಎಂದು ಪ್ರಕರಣದ ಕುರಿತು ತನಿಖೆ ನಡೆಸಿದ ರೈಲ್ವೆ ಸುರಕ್ಷತಾ ಆಯುಕ್ತ ಎ.ಎಂ.ಚೌಧರಿ (ಸಿಆರ್‌ಎಸ್–ದಕ್ಷಿಣ ವಲಯ) ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
‘ಇಂಟರ್‌ಲಾಕ್ ವ್ಯವಸ್ಥೆಯ ಮೆಕಾನಿಕಲ್ ಭಾಗಗಳನ್ನು ಅತ್ಯಂತ ಬಲವಂತವಾಗಿ ತೆಗೆದು, ಹಳಿಗಳ ಬದಲಾವಣೆ ಮಾಡಿದ್ದರಿಂದಲೇ ಅಪಘಾತ ಸಂಭವಿಸಿತ್ತು’ ಎಂದು ಹೇಳಿದ್ದಾರೆ.
ಅಕ್ಟೋಬರ್ 11ರಂದು ಮೈಸೂರು– ದರ್ಭಾಂಗ ‘ಬಾಗ್‌ಮತಿ ಎಕ್ಸ್‌ಪ್ರೆಸ್ ರೈಲು’ ತಮಿಳುನಾಡಿನ ಕವರೈಪೆಟ್ಟೈ ಸಮೀಪ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಹಲವು ಬೋಗಿಗಳು ಹಳಿತಪ್ಪಿದ್ದವು. ಇದರಿಂದ 19 ಮಂದಿ ಗಾಯಗೊಂಡಿದ್ದರು.
ಗುತ್ತಿಗೆ ವ್ಯವಸ್ಥೆ– ಎಚ್ಚರಿಕೆ ಇರಲಿ: ನಿರ್ಣಾಯಕ ಸುರಕ್ಷತಾ ಕೆಲಸಗಳನ್ನು ಗುತ್ತಿಗೆ ನೀಡುವ ಕುರಿತು ಅತ್ಯಂತ ಎಚ್ಚರ ವಹಿಸಬೇಕು’ ಎಂದು ರೈಲ್ವೆ ಇಲಾಖೆಗೆ ಎ.ಎಂ.ಚೌಧರಿ ಎಚ್ಚರಿಕೆ ನೀಡಿದ್ದಾರೆ.
‘ನಿರ್ವಹಣೆ ಹಾಗೂ ಅತ್ಯಂತ ನಿರ್ಣಾಯಕ ಕಾರ್ಯಾಚರಣಾ ವ್ಯವಸ್ಥೆಯಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರರ ನೇಮಕಾತಿ, ಗುತ್ತಿಗೆ ವ್ಯವಸ್ಥೆಯು ಕಳವಳಕಾರಿಯಾಗಿದೆ. ಈ ಕ್ಷೇತ್ರಗಳಲ್ಲಿ ಕೌಶಲ ಹೆಚ್ಚಿಸಲು ಅವರಿಗೆ ಅವಕಾಶ ನೀಡುವುದನ್ನು ಆದ್ಯತೆಯಾಗಿ ಪರಿಗಣಿಸಬೇಕು’ ಎಂದು ತಿಳಿಸಿದ್ದಾರೆ.
‘ಗುತ್ತಿಗೆ ಆಧಾರಿತ ವ್ಯವಸ್ಥೆಯನ್ನು ಅಲ್ಪಾವಧಿಯಲ್ಲಿ ಕನಿಷ್ಠ ಹಾಗೂ ದೀರ್ಘಾವಧಿಯಲ್ಲಿ ಶೂನ್ಯಕ್ಕೆ ತರಬೇಕು’ ಎಂದು ವರದಿಯಲ್ಲಿ ಒತ್ತಿ ಹೇಳಲಾಗಿದೆ.
ಇಲಾಖೆಯ ನೀತಿಯಂತೆ, ‘ಗುತ್ತಿಗೆ ಆಧಾರಿತ ನೌಕರರನ್ನು ಹೆಚ್ಚು ನಿರ್ಣಾಯಕವಲ್ಲದ ಹಾಗೂ ರೈಲ್ವೆ ಸಿಬ್ಬಂದಿಯ ಮೇಲುಸ್ತುವಾರಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ರೈಲ್ವೆ ಇಲಾಖೆಯು ತೆಗೆದುಕೊಂಡಿರುವ ಕ್ರಮಗಳ ವರದಿಯಲ್ಲಿ ತಿಳಿಸಿದೆ.
ಕಾಯಂ ನೇಮಕಾತಿ ಮಾಡಿ: ‘ಪ್ರಯಾಣಿಕರ ಸುರಕ್ಷತೆ ಕಾಪಾಡುವ ದೃಷ್ಟಿಯಿಂದ ಸಿಆರ್‌ಎಸ್ ಮಾಡಿರುವ ಎಲ್ಲ ಶಿಫಾರಸುಗಳನ್ನು ಕೂಡಲೇ ಜಾರಿ ಮಾಡಬೇಕು. ಸುರಕ್ಷತಾ, ಕಾರ್ಯಾಚರಣಾ ಕ್ಷೇತ್ರದಲ್ಲಿ ಖಾಲಿ ಉಳಿದಿರುವ ಹುದ್ದೆಗಳನ್ನು ಕಾಯಂ ನೌಕರರಿಂದಲೇ ತುಂಬಬೇಕು’ ಎಂದು ಭಾರತೀಯ ರೈಲ್ವೆಯ ಸಿಗ್ನಲಿಂಗ್ ಹಾಗೂ ಟೆಲಿಕಾಂ ನಿರ್ವಹಣಾ ಒಕ್ಕೂಟದ (ಐಆರ್‌ಎಸ್‌ಟಿಎಂಯು) ಪ್ರಧಾನ ಕಾರ್ಯದರ್ಶಿ ಅಲೋಕ್ ಚಂದ್ರ ಪ್ರಕಾಶ್ ಅವರು ರೈಲ್ವೆ ಇಲಾಖೆಗೆ ಜೂನ್ 3ರಂದು ಪತ್ರ ಬರೆದಿದ್ದಾರೆ.
‘ನಮ್ಮ ಬೇಡಿಕೆಯ ನಂತರ, ಕಾಯಂ ನೇಮಕಾತಿ ನಡೆಸುವುದಾಗಿ ರೈಲ್ವೆ ಇಲಾಖೆ ಘೋಷಿಸಿದೆ. ಆದರೂ, ಪೈಲಟ್ ಯೋಜನೆಯ ಭಾಗವಾಗಿ ಗುತ್ತಿಗೆ ಕಾರ್ಮಿಕರ ನೇಮಕವೂ ನಡೆಯುತ್ತಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.