ಕೇಂದ್ರ ಗೃಹ ಸಚಿವ ಅಮಿತ್ ಶಾ
–ಪಿಟಿಐ ಚಿತ್ರ
ನಾಂದೇಡ್: ಬಾಳಾಸಾಹೇಬ್ ಠಾಕ್ರೆ ಅವರು ಜೀವಂತವಾಗಿದ್ದಿದ್ದರೆ, ಪಾಕಿಸ್ತಾನದ ವಿರುದ್ಧ ಭಾರತದ ಸಶಸ್ತ್ರ ಪಡೆಗಳು ನಡೆಸಿದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಪ್ಪಿಕೊಂಡು ಶ್ಲಾಘಿಸುತ್ತಿದ್ದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದ ‘ಶಂಖನಾದ’ ರ‍್ಯಾಲಿಯನ್ನು ಉದ್ದೇಶಿಸಿ ಅವರು ಮಾತನಾಡಿದ್ದಾರೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಯಶಸ್ಸಿನ ಮೂಲಕ ಪಾಕಿಸ್ತಾನಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಭಾರತದ ಸಶಸ್ತ್ರ ಪಡೆಗಳು, ದೇಶದ ಜನರ ರಕ್ಷಣೆ ಮತ್ತು ಗಡಿಗಳಲ್ಲಿ ಯಾವುದೇ ರಾಜಿ ಸಾಧ್ಯವಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿವೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದಕರು ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿ ನಡೆಸುವ ಮೂಲಕ ಹೇಯ ಕೃತ್ಯ ಎಸಗಿದ್ದಾರೆ. ಕಿಡಿಗೇಡಿಗಳನ್ನು ಸುಮ್ಮನೆ ಬಿಡುವುದಿಲ್ಲ. ದಾಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬನನ್ನು ಬೇಟೆಯಾಡುತ್ತೇವೆ ಎಂದು ತಿಳಿಸಿದ್ದಾರೆ.
‘ದೇಶದಲ್ಲಿ 11 ವರ್ಷಗಳ ಹಿಂದೆ ಕಾಂಗ್ರೆಸ್ ಸರ್ಕಾರವಿತ್ತು ಎಂಬುದನ್ನು ಪಾಕಿಸ್ತಾನ ಮರೆತಂತಿದೆ. ದೇಶದಲ್ಲಿ ಈಗ ಪರಿಸ್ಥಿತಿ ಬದಲಾಗಿದೆ. ನಾವು ಉರಿ, ಪುಲ್ವಾಮಾ ಮತ್ತು ಪಹಲ್ಗಾಮ್ ದಾಳಿಗಳಿಗೆ ತಕ್ಕ ಪಾಠ ಕಲಿಸಿದ್ದೇವೆ ಮತ್ತು ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಶಾ ಗುಡುಗಿದ್ದಾರೆ.
ಮೇ 7ರಂದು ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಮೂಲಕ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಕೇವಲ 22 ನಿಮಿಷಗಳಲ್ಲಿ ನಾಶಪಡಿಸಲಾಗಿದೆ. ಆದರೆ, ಭಾರತದ ವಾಯು ರಕ್ಷಣಾ ವ್ಯವಸ್ಥೆಯು ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ದೇಶದ ನೆಲವನ್ನು ಮುಟ್ಟದಂತೆ ನೋಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.
‘ಮೇ 9ರಂದು ಭಾರತೀಯ ಸಶಸ್ತ್ರ ಪಡೆಗಳು ಪಾಕಿಸ್ತಾನದ ವಾಯು ರಕ್ಷಣಾ ವ್ಯವಸ್ಥೆಯನ್ನು ನಾಶಪಡಿಸಿದ್ದವು. ಮುಗ್ಧ ಭಾರತೀಯ ನಾಗರಿಕರ ರಕ್ತ ಚೆಲ್ಲಿದರೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಮೋದಿ ಜಿ ಘೋಷಿಸಿದ್ದಾರೆ. ಅದರಂತೆ ನಮ್ಮ ಸಹೋದರಿಯರ ‘ಸಿಂಧೂರ’ ಅಳಿಸಲು ಪ್ರಯತ್ನಿಸಿದರೆ, ಪ್ರತಿಕ್ರಿಯೆ ರಕ್ತಸಿಕ್ತವಾಗಿರುತ್ತದೆ’ ಎಂದು ಶಾ ಎಚ್ಚರಿಸಿದ್ದಾರೆ.
‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯು ಭಾರತದ ಗಡಿಗಳನ್ನು ರಕ್ಷಿಸುವ ಸರ್ಕಾರದ ಬದ್ಧತೆಯನ್ನು ಸಾಬೀತುಪಡಿಸಿದೆ ಎಂದು ಶಾ ಪುನರುಚ್ಚರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.