ADVERTISEMENT

ನೋಟಿಸ್‌ ನಂತರವೂ ಕೊಲೆ ಆರೋಪಿಯನ್ನು ಸಮರ್ಥಿಸಿಕೊಂಡ ಬಿಜೆಪಿ ಶಾಸಕ

ಪಿಟಿಐ
Published 22 ಅಕ್ಟೋಬರ್ 2020, 11:39 IST
Last Updated 22 ಅಕ್ಟೋಬರ್ 2020, 11:39 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಲ್ಲಿಯಾ (ಉತ್ತರ ಪ್ರದೇಶ): ಕೊಲೆ ಆರೋಪಿಯ ಪರ ಹೇಳಿಕೆ ನೀಡಿ, ಪಕ್ಷದಿಂದ ಶೋಕಾಸ್ ನೋಟಿಸ್ ಪಡೆದಿದ್ದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಗುರುವಾರ ಪುನಃ ಅದೇ ಆರೋಪಿಯನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದಾರೆ.

‘ಒಬ್ಬ ಅಪರಾಧಿ, ಯೋಧನಿಂದ ಗುಂಡು ಹೊಡೆಸಿಕೊಂಡು ಸತ್ತಿದ್ದಾನೆ‘ ಎಂದು ಆರೋಪಿ ಪರ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಧೀರೇಂದ್ರ ಪ್ರತಾಪ್ ಸಿಂಗ್, ಸ್ಥಳೀಯ ಬಿಜೆಪಿ ಮುಖಂಡ ಹಾಗೂ ಬಿಜೆಪಿ ಮಾಜಿ ಸೈನಿಕರ ಸೆಲ್‌ನ ಜಿಲ್ಲಾ ಘಟಕದ ಅಧ್ಯಕ್ಷ. ಈತ ಪಡಿತರ ಹಂಚಿಕೆ ವಿಚಾರದಲ್ಲಿ ನಡೆದ ಘರ್ಷಣೆಯಲ್ಲಿ ಜೈಪ್ರಕಾಶ್ ಪಾಲಗ ಗಾಮಾ(46) ಎಂಬುವನಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಈ ಘಟನೆ ಸಂಬಂಧ, ಅವರನ್ನು ಪೊಲೀಸರು ಬಂಧಿಸಿದ್ದರು. ಈ ವೇಳೆ ಶಾಸಕ ಸುರೇಂದ್ರ ಸಿಂಗ್, ‘ಅವರು ಆತ್ಮ ರಕ್ಷಣೆಗಾಗಿ ಗುಂಡು ಹಾರಿಸಿದ್ದಾರೆ‘ ಎಂದು ಸಮರ್ಥಿಸಿಕೊಂಡಿದ್ದರು.

ADVERTISEMENT

‘ಘಟನೆಯಲ್ಲಿ ಸಾವನ್ನಪ್ಪಿದ ಜೈಪ್ರಕಾಶ್, ಒಬ್ಬ ಅಪರಾಧ ಹಿನ್ನೆಲೆಯುಳ್ಳವನು. ಈತನ ವಿರುದ್ಧ ನಾಲ್ಕು ರೈಲು ದರೋಡೆ ಪ್ರಕರಣಗಳಿವೆ‘ ಎಂದು ಹೇಳಿದ ಸುರೇಂದ್ರ ಸಿಂಗ್ ‘ಒಬ್ಬ ಅಪರಾಧಿ, ಯೋಧನಿಂದ ಹತನಾಗಿದ್ದಾನೆ‘ ಎಂದು ಸುದ್ದಿಗಾರೊಂದಿಗೆ ಸಮರ್ಥಿಸಿಕೊಂಡರು.

ಈ ಪ್ರಕರಣದ ಸಂಬಂಧ ರಾಜ್ಯ ಬಿಜೆಪಿ ಘಟಕದಿಂದ ಸುರೇಂದ್ರ ಸಿಂಗ್‌ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ‘ಆದರೆ, ತನ್ನ ನಡೆಯನ್ನು ಬಿಜೆಪಿಯ ಹಿರಿಯ ನಾಯಕರು ಒಪ್ಪಿದ್ದಾರೆ‘ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದರು. ‘ಶೋಕಾಸ್ ನೋಟಿಸ್ ನೀಡುವುದು ಪಕ್ಷದ ಸಂಪ್ರದಾಯ. ಅದಕ್ಕೆ ಉತ್ತರ ಕೊಟ್ಟಿದ್ದೇನೆ‘ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.