
ಕೀರ್ತಿ ವರ್ಧನ್ ಸಿಂಗ್
ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ಜತೆಗಿನ ಸಂಬಂಧವು ಮೂರನೇ ದೇಶಗಳ ಸಂಬಂಧದಿಂದ ಸ್ವತಂತ್ರವಾಗಿದೆ ಎಂದು ಭಾರತ ಪ್ರತಿಪಾದಿಸಿದೆ.
ತನ್ನ ರಾಷ್ಟ್ರೀಯ ಹಿತಾಸಕ್ತಿಗಳ ಮೇಲೆ ಪ್ರಭಾವ ಬೀರುವಂತಹ ಪಕ್ಕದ ದೇಶಗಳ ವಿದ್ಯಮಾನಗಳ ಮೇಲೆ ಕೇಂದ್ರ ಸರ್ಕಾರ ಸದಾ ನಿಗಾವಹಿಸುತ್ತಿದೆ. ಅಲ್ಲದೆ ಅಲ್ಲಿರುವ ಭಾರತೀಯರನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಸರ್ಕಾರ ಶುಕ್ರವಾರ ಲೋಕಸಭೆಗೆ ತಿಳಿಸಿದೆ.
ಪ್ರಜಾಪ್ರಭುತ್ವ, ಸ್ಥಿರ, ಶಾಂತಿಯುತ, ಪ್ರಗತಿಪರ ಮತ್ತು ಎಲ್ಲರನ್ನೂ ಒಳಗೊಂಡ ಬಾಂಗ್ಲಾದೇಶವನ್ನು ಭಾರತ ಬೆಂಬಲಿಸುತ್ತದೆ. ಈ ಕುರಿತು ಅಲ್ಲಿನ ಮಧ್ಯಂತರ ಸರ್ಕಾರಕ್ಕೂ ತಿಳಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ರಾಜ್ಯ ಖಾತೆ ಸಚಿವ ಕೀರ್ತಿ ವರ್ಧನ್ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
‘ಭಾರತವು ಪಕ್ಕದ ದೇಶಗಳ ಜತೆ ಉತ್ತಮ ಸಂಬಂಧ ಹೊಂದಲು ಆದ್ಯತೆ ನೀಡುತ್ತದೆ. ಪರಸ್ಪರ ಹಿತಾಸಕ್ತಿಗಳು, ಸೂಕ್ಷ್ಮತೆ ಮತ್ತು ಚಾಲ್ತಿಯಲ್ಲಿರುವ ದ್ವಿಪಕ್ಷೀಯ, ಪ್ರಾದೇಶಿಕ, ಜಾಗತಿಕ ಸಂದರ್ಭಗಳಿಗೆ ತಕ್ಕಂತೆ ಅದು ವಿಕಸನಗೊಳ್ಳುತ್ತದೆ’ ಎಂದು ಅವರು ಹೇಳಿದ್ದಾರೆ.
ಭಾರತ– ಬಾಂಗ್ಲಾದೇಶದ ನಡುವಿನ ದ್ವಿಪಕ್ಷೀಯ ಸಂಬಂಧಗಳು ಸೂಕ್ಷ್ಮ ಹಂತದಲ್ಲಿ ಸಾಗುತ್ತಿದೆಯೇ ಮತ್ತು ಪಾಕಿಸ್ತಾನವು ಈ ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದೆಯೇ ಎಂದು ಕೇಳಲಾದ ಪ್ರಶ್ನೆಗೆ ಸಚಿವರು ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.