
ಹಕೀಂಪುರ (ಪಶ್ಚಿಮ ಬಂಗಾಳ): ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿ, ಇಲ್ಲಿ ಹಲವು ವರ್ಷ ತಂಗಿದ್ದ ಬಾಂಗ್ಲಾದೇಶದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ದೇಶಕ್ಕೆ ವಾಪಸಾಗುತ್ತಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಹಕೀಂಪುರದಲ್ಲಿ ಬಾಂಗ್ಲಾದ ಗಡಿಗೆ ಹೊಂದಿಕೊಂಡಿರುವ ಬಿಎಸ್‌ಎಫ್‌ನ ಗಡಿ ಭದ್ರತಾ ಠಾಣೆಯ ಬಳಿ ‘ಅಕ್ರಮ’ ವಲಸಿಗರ ಉದ್ದನೆಯ ಸಾಲು ಕಂಡುಬರುತ್ತಿದೆ.
ಸಣ್ಣ ಬಟ್ಟೆ ಚೀಲಗಳನ್ನು ಹಿಡಿದುಕೊಂಡಿರುವ ಮಹಿಳೆಯರು ಮತ್ತು ಪುರುಷರು, ಕೈಯಲ್ಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹಿಡಿದುಕೊಂಡಿರುವ ಮಕ್ಕಳು ಸರತಿ ಸಾಲಿನಲ್ಲಿ ಕಾಯುತ್ತಾ, ಬಿಎಸ್‌ಎಫ್ ಸಿಬ್ಬಂದಿಯಲ್ಲಿ, ‘ನಮ್ಮನ್ನು ಮನೆಗೆ ತೆರಳಲು ಬಿಡಿ’ ಎಂದು ಮನವಿ ಮಾಡುತ್ತಿದ್ದಾರೆ.
ಬಂಗಾಳದ ದಕ್ಷಿಣ ಭಾಗದ ಗಡಿ ಪ್ರದೇಶಗಳಲ್ಲಿ ತಮ್ಮ ದೇಶಕ್ಕೆ ಮರಳಲು ಪ್ರಯತ್ನಿಸುತ್ತಿರುವ ಬಾಂಗ್ಲಾದ ಪ್ರಜೆಗಳ ಸಂಖ್ಯೆ ನವೆಂಬರ್ ಅರಂಭದಿಂದ ತೀವ್ರಗತಿಯಲ್ಲಿ ಏರಿಕೆಯಾಗಿದೆ ಎಂದು ಇಲ್ಲಿನ ಭದ್ರತಾ ಸಿಬ್ಬಂದಿ ಮತ್ತು ಸ್ಥಳೀಯ ನಿವಾಸಿಗಳು ಹೇಳುತ್ತಾರೆ.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಗೂ ಈ ಬೆಳವಣಿಗೆಗೂ ಸಂಬಂಧವಿದೆ ಎಂಬುದು ಅಧಿಕಾರಿಗಳ ಹೇಳಿಕೆ.
ಬಾಂಗ್ಲಾಕ್ಕೆ ವಾಪಸಾಗಲು ಗಡಿ ಭದ್ರತಾ ಠಾಣೆಯ ಬಳಿ ತನ್ನ ಮಗುವಿನೊಂದಿಗೆ ಕಾಯುತ್ತಿದ್ದ ಶಾಹಿನ್ ಬೀಬಿ, ‘ನಾನು ಬಾಂಗ್ಲಾದ ಖುಲ್ನಾ ಜಿಲ್ಲೆಯ ನಿವಾಸಿಯಾಗಿದ್ದು, ಅಲ್ಲಿಗೆ ವಾಪಸಾಗಲು ಬಯಸಿದ್ದೇನೆ’ ಎಂದರು.
‘ನಾವು ಬಡವರಾಗಿದ್ದ ಕಾರಣ ಬಂದಿದ್ದೇನೆ. ಕೋಲ್ಕತ್ತದ ನ್ಯೂಟೌನ್‌ನಲ್ಲಿ ನೆಲಸಿ ಮನೆಕೆಲಸ ಮಾಡಿಕೊಂಡು ತಿಂಗಳಿಗೆ ₹20 ಸಾವಿರ ಸಂಪಾದಿಸುತ್ತಿದ್ದೆ. ನನ್ನ ಬಳಿ ಸೂಕ್ತ ದಾಖಲೆಗಳಿಲ್ಲ. ಆದ್ದರಿಂದ ಈಗ ಖುಲ್ನಾಗೆ ಹಿಂತಿರುಗಲು ಬಯಸುತ್ತೇನೆ’ ಎಂದು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ತಂಗಿದ್ದ ಅವಧಿಯಲ್ಲಿ ಮಧ್ಯವರ್ತಿಗಳ ಮೂಲಕ ಆಧಾರ್ ಕಾರ್ಡ್, ಪಡಿತರ ಚೀಟಿ ಮತ್ತು ಮತದಾರರ ಗುರುತಿನ ಚೀಟಿಗಳನ್ನು ಪಡೆದುಕೊಂಡಿರುವುದಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಹಲವರು ಒಪ್ಪಿಕೊಂಡಿದ್ದಾರೆ.
ಎಸ್‌ಐಆರ್ ಪ್ರಕ್ರಿಯೆ ವೇಳೆ ಹಳೆಯ ದಾಖಲೆಗಳ ಪರಿಶೀಲಿಸಲಾಗುತ್ತದೆ. ಆದ್ದರಿಂದ ವಿಚಾರಣೆ ಎದುರಿಸುವುದನ್ನು ಮತ್ತು ಬಂಧನಕ್ಕೆ ಒಳಗಾಗುವುದನ್ನು ತಪ್ಪಿಸಲು ಸ್ವದೇಶಕ್ಕೆ ವಾಪಸಾಗಲು ಬಯಸುವುದಾಗಿ ಅವರು ಹೇಳುತ್ತಾರೆ.
ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಾ, ಕೋಲ್ಕತ್ತದಲ್ಲಿ ಎಂಟು ವರ್ಷಗಳಿಂದ ವಾಸಿಸುತ್ತಿದ್ದ ಯುವಕ, ‘ಇನ್ನು ಮುಂದೆ ಇಲ್ಲಿ ನೆಲಸುವುದಿಲ್ಲ’ ಎಂದಿದ್ದಾರೆ. ‘ಅಧಿಕಾರಿಗಳು ಹಳೆಯ ಕಾಗದಪತ್ರಗಳನ್ನು ಕೇಳಿದರೆ, ಅವರಿಗೆ ತೋರಿಸಲು ನಮ್ಮಲ್ಲಿ ಏನೂ ಇಲ್ಲ. ಅವರ ಪ್ರಶ್ನೆಗಳನ್ನು ಎದುರಿಸುವ ಬದಲು ಇಲ್ಲಿಂದ ಹೊರಡುವುದೇ ಉತ್ತಮ’ ಎಂದಿದ್ದಾರೆ.
Cut-off box - ಏಕಾಏಕಿ ಹೆಚ್ಚಳ ಬಾಂಗ್ಲಾಕ್ಕೆ ವಾಪಸಾಗುತ್ತಿರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿರುವುದನ್ನು ಗಡಿ ಭದ್ರತಾ ಅಧಿಕಾರಿಗಳು ಖಚಿತಪಡಿಸಿದ್ದಾರೆ. ‘ಪ್ರತಿದಿನ 150ರಿಂದ 200 ಮಂದಿಯನ್ನು ವಶಕ್ಕೆ ಪಡೆದು ದಾಖಲೆಗಳನ್ನು ಪರಿಶೀಲಿಸಿ ಬಾಂಗ್ಲಾಕ್ಕೆ ವಾಪಸ್ ಕಳುಹಿಸುತ್ತಿದ್ದೇವೆ. ಬಾಂಗ್ಲಾಕ್ಕೆ ಮರಳುತ್ತಿರುವವರ ಸಂಖ್ಯೆ ನ.4ರ ಬಳಿಕ (ಎಸ್‌ಐಆರ್ ಪ್ರಕ್ರಿಯೆ ಆರಂಭವಾದ ದಿನ) ಏಕಾಏಕಿ ಹೆಚ್ಚಳವಾಗಿದೆ’ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದರು. ‘ಇವರೆಲ್ಲರೂ ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ಸ್ವದೇಶಕ್ಕೆ ವಾಪಸಾಗುತ್ತಿದ್ದಾರೆ ಎಂದು ಭಾವಿಸಲು ಸಾಧ್ಯವಿಲ್ಲ’ ಎಂದು ಹೇಳಿದರು. ‘ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ಪರಿಶೀಲಿಸಲಾಗುತ್ತದೆ. ಬಯೋಮೆಟ್ರಿಕ್ ವಿವರಗಳನ್ನು ಜಿಲ್ಲಾಧಿಕಾರಿಗಳು ಮತ್ತು ರಾಜ್ಯ ಪೊಲೀಸರಿಗೆ ಕಳುಹಿಸಲಾಗುತ್ತದೆ. ಈ ಪ್ರಕ್ರಿಯೆಗೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.