
ನವದೆಹಲಿ: ಬಾಂಗ್ಲಾದೇಶದಲ್ಲಿ ಬಿಕ್ಕಟ್ಟು ತೀವ್ರಗೊಂಡಿದ್ದು, ನವದೆಹಲಿ ಮತ್ತು ತ್ರಿಪುರಾದಲ್ಲಿರುವ ತನ್ನ ರಾಜತಾಂತ್ರಿಕ ಕಚೇರಿಯಲ್ಲಿ ವೀಸಾ ಸೇವೆಗಳನ್ನು ಬಾಂಗ್ಲಾ ಸ್ಥಗಿತಗೊಳಿಸಿದೆ.
ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ದಾಳಿಯನ್ನು ವಿರೋಧಿಸಿ ಕಳೆದ ಕೆಲ ದಿನಗಳಿಂದ ಈ ಎರಡು ರಾಯಭಾರಿ ಕೆಚೇರಿಗಳ ಮುಂದೆ ಪ್ರತಿಭಟನೆಗಳು ನಡೆಯುತ್ತಿದ್ದು, ವೀಸಾ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿಯಲ್ಲಿರುವ ಬಾಂಗ್ಲಾದೇಶ ರಾಜತಾಂತ್ರಿಕ ಕಚೇರಿ ಪ್ರಕಟಣೆ ಹೊರಡಿಸಿ, ಅನಿವಾರ್ಯ ಕಾರಣಗಳಿಗೆ ವೀಸಾ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ. ಭಾನುವಾರ ನಡೆದ ಪ್ರತಿಭಟನೆ ನಂತರ ತ್ರಿಪುರದಲ್ಲಿರುವ ರಾಜತಾಂತ್ರಿಕ ಕಚೇರಿ ಕೂಡ ಇದೇ ರೀತಿಯ ಪ್ರಕಟಣೆ ಹೊರಡಿಸಿದೆ. ಪಶ್ಚಿಮ ಬಂಗಾಳದ ಸಿರಿಗುರಿಯಲ್ಲಿರುವ ಖಾಸಗಿ ಸಂಸ್ಥೆಗಳು ಕೂಡ ವೀಸಾ ಸೇವೆಗಳನ್ನು ತಾತ್ಕಲಿಕವಾಗಿ ರದ್ದುಗೊಳಿಸಿವೆ ಎಂದು ತಿಳಿದುಬಂದಿದೆ.
ಬಾಂಗ್ಲಾದಲ್ಲಿರುವ ಭಾರತ ಹೈಕಮಿಷನರ್ ಕಚೇರಿ ಮುಂದೆಯೂ ಪ್ರತಿಭಟನೆಗಳು ನಡೆಯುತ್ತಿದ್ದು, ಕಳೆದ ಗುರುವಾರದಿಂದಲೇ ವೀಸಾ ಸೇವೆಗಳನ್ನು ಭಾರತ ಸ್ಥಗಿತಗೊಳಿಸಿದೆ.
ಡಿ.12ರಂದು ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಅವರ ಮರಣದ ನಂತರ ಬಾಂಗ್ಲಾದೇಶದಲ್ಲಿ ಹೊಸದಾಗಿ ಪ್ರತಿಭಟನೆಗಳು ಭುಗಿಲೆದ್ದಿವೆ. ಶೇಖ್ ಹಸೀನಾ ಸರ್ಕಾರದ ಪತನಕ್ಕೆ ಕಾರಣವಾದ ವಿದ್ಯಾರ್ಥಿಗಳ ಪ್ರತಿಭಟನೆಯಲ್ಲಿ ಹಾದಿ ಪ್ರಮುಖ ಪಾತ್ರ ವಹಿಸಿದ್ದರು.
ಹಾದಿ ಹತ್ಯೆಯಾದ ಬಳಿಕ ಬಾಂಗ್ಲಾದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಈ ವೇಳೆ ಹಿಂದು ವ್ಯಕ್ತಿ ದೀಪು ಚಂದ್ರದಾಸ್ ಎಂಬುವರನ್ನು ಗುಂಪೊಂದು ಬೆಂಕಿ ಹಚ್ಚಿ ಹತ್ಯೆ ಮಾಡಿತ್ತು.
ಡಿ.21ರಂದು ವಿದ್ಯಾರ್ಥಿ ಪ್ರತಿಭಟನೆಯಲ್ಲಿ ಭಾಗಿಯಾದ ಮತ್ತೊಬ್ಬ ನಾಯಕ ಮೋತಲೆಬ್ ಸಿಕ್ದಾರ್ (42) ಹತ್ಯೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.