ಬರೇಲಿ: ‘ಛಾವಾ’ ಚಿತ್ರವನ್ನು ನಿಷೇಧಿಸಬೇಕೆಂದು ಬರೆಲ್ವಿ ಪಂಥದ ಧರ್ಮಗುರು ಮೌಲಾನಾ ಶಹಾಬುದ್ದೀನ್ ರಜ್ವಿ ಒತ್ತಾಯಿಸಿದ್ದಾರೆ. ಚಿತ್ರವು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದೆ ಮತ್ತು ನಾಗ್ಪುರದಲ್ಲಿ ನಡೆದ ಗಲಭೆಗೆ ನೇರ ಹೊಣೆಯಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ, ಅಖಿಲ ಭಾರತ ಮುಸ್ಲಿಂ ಜಮಾತ್‌ನ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ರಜ್ವಿ ಪತ್ರ ಬರೆದಿದ್ದಾರೆ. ‘ಛಾವಾ’ ಚಿತ್ರವನ್ನು ನಿಷೇಧಿಸಬೇಕು. ಚಿತ್ರದ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರರ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಕೋರಿದ್ದಾರೆ.
‘ಛಾವಾ’ ಚಿತ್ರ ಬಿಡುಗಡೆಯಾದಾಗಿನಿಂದ ದೇಶದ ವಾತಾವರಣ ಹದಗೆಡುತ್ತಿದೆ. ಚಿತ್ರದಲ್ಲಿ, ಚಕ್ರವರ್ತಿ ಔರಂಗಜೇಬನನ್ನು ಹಿಂದೂ ವಿರೋಧಿ ಎಂದು ಚಿತ್ರಿಸುವ ಮೂಲಕ ಹಿಂದೂ ಯುವಕರನ್ನು ಪ್ರಚೋದಿಸಲಾಗಿದೆ. ಇದೇ ಕಾರಣಕ್ಕಾಗಿ ಹಿಂದೂ ಸಂಘಟನೆಗಳ ನಾಯಕರು ವಿವಿಧ ಸ್ಥಳಗಳಲ್ಲಿ ಚಕ್ರವರ್ತಿ ಔರಂಗಜೇಬನ ಬಗ್ಗೆ ದ್ವೇಷ ಭಾಷಣ ಮಾಡುತ್ತಿದ್ದಾರೆ’ ಎಂದು ರಜ್ವಿ ಪತ್ರದಲ್ಲಿ ತಿಳಿಸಿದ್ದಾರೆ.
‘ದೇಶದಲ್ಲಿನ ಮುಸ್ಲಿಮರು ಚಕ್ರವರ್ತಿ ಔರಂಗಜೇಬನನ್ನು ತಮ್ಮ ಆರಾಧ್ಯ ದೈವ ಮತ್ತು ನಾಯಕ ಎಂದು ಪರಿಗಣಿಸುವುದಿಲ್ಲ. ನಾವು ಅವರನ್ನು ಕೇವಲ ಒಬ್ಬ ಆಡಳಿತಗಾರ ಎಂದು ಪರಿಗಣಿಸುತ್ತೇವೆ. ಅದಕ್ಕಿಂತ ಹೆಚ್ಚೇನೂ ಅಲ್ಲ’ ಎಂದು ರಜ್ವಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.