ಜೈಪುರ: ರಾಜಸ್ಥಾನದ ಬಾರ್ಮೇಡ್ ಜಿಲ್ಲೆಯ ಗುರುಕುಲವೊಂದರಲ್ಲಿ ಮಕ್ಕಳಿಬ್ಬರು ಮಲಗುವ ಹಾಸಿಗೆ ಒದ್ದೆ ಮಾಡಿದ್ದಾರೆಂದು ಕಾದ ಕಬ್ಬಿಣದ ಸರಳಿನಿಂದ ಗುರುಕುಲದ ಪಾಲಕ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಘಟನೆಯು ಸೇಡ್ವಾದ ಹರ್ಪಾಲಿಯಾ ಗ್ರಾಮದಲ್ಲಿ ಆ.17 ರಂದು ನಡೆದಿದೆ. ಬಡ, ಅಲೆಮಾರಿ ಮತ್ತು ಅನಾಥ ಮಕ್ಕಳಿಗೆ ಆಶ್ರಯ ನೀಡುವ ಉದ್ದೇಶದಿಂದ ಹರಪಾಲೇಶ್ವರ ಮಹಾದೇವ್ ವಿಕಾಸ್ ಸೇವಾ ಸಮಿತಿಯು ಈ ಗುರುಕುಲವನ್ನು 2022ರಲ್ಲಿ ಸ್ಥಾಪನೆ ಮಾಡಿತ್ತು. ಈ ಗುರುಕುಲದಲ್ಲಿ ಅಕ್ಕಪಕ್ಕದ ಊರಿನ ಮಕ್ಕಳು ಓದುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಹಿಂಸೆಯನ್ನು ತಳಲಾರದೆ ವಿದ್ಯಾರ್ಥಿಯೊಬ್ಬ ರಾತ್ರಿ ವೇಳೆ ಗುರುಕುಲದಿಂದ ತಪ್ಪಿಸಿಕೊಡು ಬಂದಿದ್ದಾನೆ. ಆತನು ತನ್ನ ಪೋಷಕರ ಬಳಿ ಗುರುಕುಲದಲ್ಲಿ ನೀಡುವ ಹಿಂಸೆಯನ್ನು ಹೇಳಿಕೊಂಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಮಕ್ಕಳ ಮೇಲೆ ಹಲ್ಲೆ ನಡೆಸಿದ್ದು ಭರತ್‌ಪುರ ನಿವಾಸಿ ನಾರಾಯಣ ಗಿರಿ ಎಂದು ತಿಳಿದು ಬಂದಿದೆ. ಈತ ಗುರುಕುಲದಲ್ಲಿ ಶಿಕ್ಷಕ ಹಾಗೂ ಪಾಲಕರಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ನಾರಾಯಣ ಗಿರಿ ಮಕ್ಕಳ ಮೇಲೆ ಕಾದ ಕಬ್ಬಿಣದ ಸರಳಿನಿಂದ ಹಲ್ಲೇ ಮಾಡಿರುವುದು ಖಚಿತವಾಗಿದ್ದು ಆತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಚೌಹಾತನ್ ಉಪ ಡಿಓಎಸ್ಪಿ ಜೀವನ್ಲಾಲ್ ಖತ್ರಿ ಹೇಳಿದ್ದಾರೆ.
‘ಈ ಪ್ರಕರಣವನ್ನು ಶಿಕ್ಷಣ ಇಲಾಖೆಯು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲು ಆರಂಭಿಸಿದೆ. ಸ್ಥಳ ಮಹಜರು ಪಡೆಯಲು ತಂಡವನ್ನು ರಚಿಸಲಾಗಿದೆ. ಗುರುಕುಲಕ್ಕೆ ಭೇಟಿ ನೀಡಿ ಪೋಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವರದಿಯನ್ನು ಸಲ್ಲಿಸಲಾಗುವುದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮಕ್ಕಳನ್ನು ನಿಶಬ್ದವಾಗಿರುವಂತೆ ಮಾಡಲು ಮಕ್ಕಳಿಗೆ ದೈಹಿಕ ಹಿಂಸೆ ನೀಡಿದ್ದಾರೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಗುರುಕುಲದ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಸ್ಥಳೀಯರು ಹಾಗೂ ಪೋಷಕರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.