ADVERTISEMENT

ಬಾಟ್ಲಾ ಹೌಸ್ ಎನ್‌ಕೌಂಟರ್: ಇನ್‌ಸ್ಪೆಕ್ಟರ್ ಹಂತಕ ಜುನೈದ್‌ಗೆ ಗಲ್ಲು ಶಿಕ್ಷೆ

ಏಜೆನ್ಸೀಸ್
Published 16 ಮಾರ್ಚ್ 2021, 1:57 IST
Last Updated 16 ಮಾರ್ಚ್ 2021, 1:57 IST
ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಹಚರ ಅರಿಜ್‌ ಖಾನ್
ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಹಚರ ಅರಿಜ್‌ ಖಾನ್   

ನವದೆಹಲಿ: 2008ರ ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಪ್ರಕರಣದಲ್ಲಿ ಅಪರಾಧಿಯಾಗಿದ್ದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಹಚರ ಅರಿಜ್‌ ಖಾನ್‌ ಅಲಿಯಾಸ್ ಜುನೈದ್‌ಗೆ ಗಲ್ಲು ಶಿಕ್ಷೆ ವಿಧಿಸಿ ದೆಹಲಿ ನ್ಯಾಯಾಲಯ ತೀರ್ಪು ನೀಡಿದೆ.‌

‘ಇದೊಂದು ಅಪರೂಪದಲ್ಲೇ ಅಪರೂಪದ ಅಪರಾಧ ಪ್ರಕರಣ. ಯಾವುದೇ ರೀತಿಯ ಪ್ರಚೋದನೆ ಇಲ್ಲದಿದ್ದರೂ ಪೊಲೀಸರ ಮೇಲೆ ಅಪರಾಧಿಯು ಕ್ರೂರ ಕೃತ್ಯವೆಸಗಿದ್ದಾನೆ. ಈತ ದೇಶದ ಶತ್ರು’ ಎಂದು ಉಲ್ಲೇಖಿಸಿರುವ ನ್ಯಾಯಾಲಯವು, ಅಪರಾಧಿ ಅರಿಜ್‌ನನ್ನು ಸಾಯುವವರೆಗೂ ನೇಣಿಗೆ ಹಾಕಬೇಕು ಎಂದು ಹೇಳಿದೆ.

ಬಾಟ್ಲಾ ಹೌಸ್‌ ಎನ್‌ಕೌಂಟರ್‌ನಲ್ಲಿ ದೆಹಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೋಹನ್‌ ಚಾಂದ್‌ ಶರ್ಮಾ ಹುತಾತ್ಮರಾಗಿದ್ದರು. ಶರ್ಮಾ ಅವರ ಹತ್ಯೆಗಾಗಿ ಅರಿಜ್‌ಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ADVERTISEMENT

ಈ ಪ್ರಕರಣದಲ್ಲಿ ಅರಿಜ್‌ಗೆ ₹ 11 ಲಕ್ಷ ದಂಡವನ್ನು ಸಹ ವಿಧಿಸಲಾಗಿದೆ. ಈ ಮೊತ್ತದಲ್ಲಿ ತಕ್ಷಣವೇ ಶರ್ಮಾ ಅವರ ಕುಟುಂಬದ ಸದಸ್ಯರಿಗೆ ₹ 10 ಲಕ್ಷ ನೀಡಬೇಕು ಎಂದು ಆದೇಶಿಸಿದೆ.

‘₹ 10 ಲಕ್ಷ ಪರಿಹಾರ ಕಡಿಮೆಯಾಯಿತು ಎನ್ನುವುದು ನನ್ನ ಅಭಿಪ್ರಾಯ. ಹೀಗಾಗಿ, ಹೆಚ್ಚುವರಿ ಪರಿಹಾರಕ್ಕೆ ಸಂಬಂಧಿಸಿದಂತೆ ದೆಹಲಿಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಈ ವಿಷಯ ವರ್ಗಾಯಿಸಲಾಗುವುದು’ ಎಂದು ತೀರ್ಪು ನೀಡಿರುವ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಸಂದೀಪ್‌ ಯಾದವ್‌ ತಿಳಿಸಿದ್ದಾರೆ.

2008ರ ಸೆಪ್ಟೆಂಬರ್‌ 13ರಂದು ದೆಹಲಿಯಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಲ್ಲಿ 39 ಮಂದಿ ಸಾವಿಗೀಡಾಗಿದ್ದರು ಮತ್ತು 159 ಮಂದಿ ಗಾಯಗೊಂಡಿದ್ದರು. ಬಳಿಕ, ಸೆಪ್ಟೆಂಬರ್‌ 19ರಂದು ದಕ್ಷಿಣ ದೆಹಲಿಯ ಜಮಿಯಾ ನಗರದಲ್ಲಿ ಪೊಲೀಸರು ಮತ್ತು ಭಯೋತ್ಪಾದಕರ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇನ್‌ಸ್ಪೆಕ್ಟರ್‌ ಶರ್ಮಾ ಹುತಾತ್ಮರಾಗಿದ್ದರು.

ಎನ್‌ಕೌಂಟರ್‌ ಸ್ಥಳದಿಂದ ಪರಾರಿಯಾಗಿದ್ದ ಅರಿಜ್‌ ಖಾನ್‌ನನ್ನು 2009ರಲ್ಲಿ ‘ಘೋಷಿತ ಅಪರಾಧಿ’ ಎಂದು ಪ್ರಕಟಿಸಲಾಗಿತ್ತು. ಬಳಿಕ, 2018ರ ಫೆಬ್ರುವರಿ 14ರಂದು ಈತನನ್ನು ಬಂಧಿಸಲಾಗಿತ್ತು.

'ಇದು ಕೇವಲ ಹತ್ಯೆ ಅಲ್ಲ. ನ್ಯಾಯವನ್ನು ಸಮರ್ಥಿಸಿಕೊಳ್ಳುವ ಮತ್ತು ಕಾನೂನು ಜಾರಿಗೊಳಿಸುವ ಅಧಿಕಾರಿಯ ಹತ್ಯೆಯಾಗಿದೆ. ಕರ್ತವ್ಯದಲ್ಲಿದ್ದಾಗಲೇ ಅವರ ಹತ್ಯೆಯಾಗಿದೆ. ಹೀಗಾಗಿ, ಅರಿಜ್‌ ಖಾನ್‌ಗೆ ಮರಣದಂಡನೆ ಶಿಕ್ಷೆ ವಿಧಿಸಬೇಕು' ಎಂದು ಸರ್ಕಾರಿ ವಕೀಲ ಎ.ಟಿ ಅನ್ಸಾರಿ ಅವರು ನ್ಯಾಯಾಲಯದ ಮುಂದೆ ಪ್ರತಿಪಾದಿಸಿದ್ದರು.

‘ಅರಿಜ್‌ ಮತ್ತು ಇತರರು ಮಾರಕ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು. ಅವರು ಯಾರನ್ನು ಬೇಕಾದರೂ ಸಾಯಿಸಲು ಸಿದ್ಧರಾಗಿದ್ದರು. ಯಾವುದೇ ಪ್ರಚೋದನೆ ಇಲ್ಲದಿದ್ದರೂ ಅವರೇ ಮೊದಲು ಗುಂಡು ಹಾರಿಸಿದರು’ ಎಂದು ವಾದಿಸಿದ್ದರು

ಗಲ್ಲು ಶಿಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದ ಅರಿಜ್‌ ಪರ ವಕೀಲ ಎಂ.ಎಸ್‌. ಖಾನ್‌, ‘ಈ ಘಟನೆಯು ಪೂರ್ವಯೋಜಿತವಾಗಿರಲಿಲ್ಲ’ ಎಂದು ವಾದಿಸಿದ್ದರು.

‘ಅರಿಜ್‌ ಖಾನ್‌ ಮತ್ತು ಆತನ ಸಹಚರರು ಪೊಲೀಸ್‌ ಅಧಿಕಾರಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸ್‌ ಅಧಿಕಾರಿಯ ಹತ್ಯೆ ಮಾಡಿರುವುದು ಸಾಬೀತಾಗಿದೆ. ಅರಿಜ್‌ ಖಾನ್‌ ಮತ್ತು ಆತನ ಸಹಚರರು ತಪ್ಪಿತಸ್ಥರು’ ಎಂದು ನ್ಯಾಯಾಲಯ ಮಾರ್ಚ್‌ 8ರಂದು ಹೇಳಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣಾ ನ್ಯಾಯಾಲಯ ಇಂಡಿಯನ್‌ ಮುಜಾಹಿದ್ದೀನ್‌ ಸಂಘಟನೆ ಭಯೋತ್ಪಾದಕ ಶಹಜಾದ್‌ ಅಹ್ಮದ್‌ಗೆ 2013ರ ಜುಲೈನಲ್ಲಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ಆದೇಶದ ವಿರುದ್ಧ ಸಲ್ಲಿಸಿರುವ ಅರ್ಜಿಯು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ.

ವಿವಾದಕ್ಕೀಡಾಗಿದ್ದ ಎನ್‌ಕೌಂಟರ್‌
ಬಾಟ್ಲಾ ಹೌಸ್‌ ಎನ್‌ಕೌಂಟರ್‌ ನಕಲಿ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಹೇಳಿಕೆ ನೀಡಿದ್ದು ವಿವಾದಕ್ಕೀಡಾಗಿತ್ತು. ಆದರೆ, ಈ ಹೇಳಿಕೆಯಿಂದ ದೂರ ಉಳಿಯುವುದಾಗಿ ಕಾಂಗ್ರೆಸ್‌ ಹೇಳಿತ್ತು.

ಎನ್‌ಕೌಂಟರ್‌ ಚಿತ್ರಗಳನ್ನು ನೋಡಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಣ್ಣೀರು ಹಾಕಿದ್ದರು ಎಂದು ಕಾಂಗ್ರೆಸ್‌ ನಾಯಕ ಸಲ್ಮಾನ್‌ ಖುರ್ಷಿದ್‌ ಅವರು ನೀಡಿದ್ದಾರೆ ಎನ್ನಲಾದ ಹೇಳಿಕೆಯೂ ರಾಜಕೀಯ ವಲಯದಲ್ಲಿ ವಾಗ್ವಾದಕ್ಕೆ ಕಾರಣವಾಗಿತ್ತು.

ಜತೆಗೆ, ಹಲವು ವರ್ಷಗಳ ಕಾಲ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಈ ವಿಷಯ ಆರೋಪ ಮತ್ತು ಪ್ರತ್ಯಾರೋಪಕ್ಕೂ ಕಾರಣವಾಗಿತ್ತು. ಅಧಿಕಾರದಲ್ಲಿದ್ದಾಗ ಕಾಂಗ್ರೆಸ್‌ ಭಯೋತ್ಪಾದನೆ ವಿರುದ್ಧ ಮೃದು ಧೋರಣೆ ಹೊಂದಿದೆ ಎಂದು ಬಿಜೆಪಿ ಟೀಕಿಸಿತ್ತು.

ಕ್ಷಮೆಯಾಚನೆಗೆ ಆಗ್ರಹ: ಬಾಟ್ಲಾ ಹೌಸ್‌ ಎನ್‌ಕೌಂಟರ್‌ ಕುರಿತು ನೀಡಿರುವ ತೀರ್ಪಿನಿಂದ ಭಯೋತ್ಪಾದಕರ ಬಗ್ಗೆ ಅನುಕಂಪ ಹೊಂದಿದವರ ಬಣ್ಣ ಬಯಲಾಗಿದೆ ಎಂದು ಬಿಜೆಪಿ ಹೇಳಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರನ್ನು ಪ್ರಶ್ನಿಸಿದ್ದ ಎನ್‌ಕೌಂಟರ್‌ ಬಗ್ಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವ ಪ್ರಕಾಶ್‌ ಜಾವಡೇಕರ್‌ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.