ADVERTISEMENT

ಶತ್ರುಘ್ನಗೆ ಪುನರಾಯ್ಕೆ ಸುಲಭವಲ್ಲ

​ಪ್ರಜಾವಾಣಿ ವಾರ್ತೆ
Published 18 ಮೇ 2019, 3:57 IST
Last Updated 18 ಮೇ 2019, 3:57 IST
ಶತ್ರುಘ್ನ ಸಿನ್ಹಾ
ಶತ್ರುಘ್ನ ಸಿನ್ಹಾ   

ಪಟ್ನಾ ಸಾಹಿಬ್: 2019ರ ಲೋಕಸಭಾ ಚುನಾವಣೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವ ಕ್ಷೇತ್ರಗಳಲ್ಲಿ ಪಟ್ನಾ ಸಾಹಿಬ್ ಸಹ ಒಂದು. ಈ ಕ್ಷೇತ್ರವನ್ನು ಬಿಜೆಪಿ ಸಂಸದರಾಗಿ ಎರಡು ಬಾರಿ ಪ್ರತಿನಿಧಿಸಿದ್ದ ನಟ ಶತ್ರುಘ್ನ ಸಿನ್ಹಾ ಅವರು ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಇಲ್ಲಿ ಬಿಜೆಪಿ ಅಭ್ಯರ್ಥಿ.

ಇಬ್ಬರು ನಾಯಕರೂ ಕಾಯಸ್ತ ಸಮುದಾಯದವರು. ಕ್ಷೇತ್ರದಲ್ಲಿ ಕಾಯಸ್ತ ಸಮುದಾಯದ ಜನ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಬ್ಬರೂ ರಾಜಕಾರಣದಲ್ಲಿ ಪಳಗಿದವರು. ಆದರೆ ಚುನಾವಣಾ ರಾಜಕಾರಣದ ನಾಡಿಮಿಡಿತ ಇಬ್ಬರಿಗೂ ತಿಳಿದಿಲ್ಲ ಎಂಬುದು ಕ್ಷೇತ್ರದ ಜನರ ಮಾತು.

‘ಶತ್ರುಘ್ನ ಸಿನ್ಹಾ ಚೆನ್ನಾಗಿ ಡೈಲಾಗೆ ಹೊಡೆಯುತ್ತಾರೆ. ಆದರೆ ಅವರಿಗೆ ಮತದಾರರ ಜತೆ ಸಂಪರ್ಕವೇ ಇಲ್ಲ’ ಎನ್ನುತ್ತಾರೆ ಪಟ್ನಾ ಸಾಹಿಬ್ ಜನ. ‘ರವಿಶಂಕರ್ ಅವರು ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಆದರೆ ಅವರು ಜನರೊಂದಿಗೆ, ಮತದಾರರೊಂದಿಗೆ ಬೆರೆತೇ ಇಲ್ಲ’ ಎನ್ನುವ ಮಾತೂ ಕೇಳುತ್ತದೆ.

ADVERTISEMENT

ಆದರೆ ಶತ್ರುಘ್ನ ಅವರು ಈ ಹಿಂದೆ ಚುನಾವಣೆಯಲ್ಲಿ ಗೆದ್ದಾಗಲೆಲ್ಲಾ ಅವರು ಬಿಜೆಪಿ ಅಭ್ಯರ್ಥಿಯಾಗಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿದೆ. ಹೀಗಾಗಿಯೇ ಶತ್ರುಘ್ನ ಅವರು ಭಾರಿ ಅಂತರದಲ್ಲಿ ಗೆಲುವು ಸಾಧಿಸುತ್ತಿದ್ದರು. ಆದರೆ ಅವರು ಈಗ ಬಿಜೆಪಿಯ ಪ್ರಧಾನ ನಾಯಕತ್ವದ ವಿರುದ್ಧ ಬಂಡೆದ್ದು, ಪಕ್ಷ ತೊರೆದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಈ ಹಿಂದೆ ಅವರಿಗೆ ಬಂದಿದ್ದ ಮತಗಳು ಈಗಲೂ ಬರುತ್ತವೆ ಎಂಬುದಕ್ಕೆ ಖಾತರಿ ಇಲ್ಲ. ಇಲ್ಲಿ ಮತಗಳನ್ನು ಹೊಂದಿರುವ ಜೆಡಿಯು ಈ ಬಾರಿ ಬಿಜೆಪಿ ಜತೆಗಿನ ಮೈತ್ರಿಯ ಕಾರಣಕ್ಕೆ ತನ್ನ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. ಈ ಎಲ್ಲಾ ಅಂಶಗಳು ಶತ್ರುಘ್ನ ಅವರಿಗೆ ಕಠಿಣವಾಗಲಿವೆ.

ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ವಿರುದ್ಧದ ಅಲೆ ಇದೆ. ನೋಟುರದ್ಧತಿ ಮತ್ತು ಜಿಎಸ್‌ಟಿಯ ಕಾರಣದಿಂದ ಇಲ್ಲಿನ ವ್ಯಾಪಾರಿ ಸಮುದಾಯ ತೀವ್ರ ಅಸಮಾಧಾನಗೊಂಡಿದೆ. ಮತದಾನದ ಮೇಲೆ ಇದು ಪ್ರಭಾವ ಬೀರುವ ಸಾಧ್ಯತೆ ಇದೆ. ಬಿಜೆಪಿಯಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಎಂ.ಕೆ.ಸಿನ್ಹಾ ಸಹ ಈ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದರು. ಕಾಯಸ್ತ ಸಮುದಾಯದವರೇ ಆಗಿರುವ ಎಂ.ಕೆ.ಸಿನ್ಹಾ ಅವರು ಇಲ್ಲಿ ರವಿಶಂಕರ್ ಅವರಿಗಿಂತಲೂ ಪ್ರಭಾವಿ ನಾಯಕ. ರವಿಶಂಕರ್ ಅವರ ಮೇಲೆ ಎಂ.ಕೆ.ಸಿನ್ಹಾ ಅವರುಹೊಂದಿರುವಅಸಮಾಧಾನವು ಬಿಜೆಪಿಗೆ ಮುಳುವಾಗುವ ಸಾಧ್ಯತೆಯೂ ಇದೆ. ಈ ಕ್ಷೇತ್ರದ ಪರಿಮಿತಿಯಲ್ಲಿ ಬರುವ ಆರು ವಿಧಾನಸಭಾ ಕ್ಷೇತ್ರಗಳಲ್ಲಿ 5ರಲ್ಲಿ ಬಿಜೆಪಿ ಶಾಸಕರಿದ್ದಾರೆ. ಹೀಗಾಗಿ ಪ್ರಬಲ ಸ್ಪರ್ಧೆ ಇದ್ದರೂ ರವಿಶಂಕರ್ ಅವರೇ ಗೆಲ್ಲುವ ನೆಚ್ಚಿನ ಅಭ್ಯರ್ಥಿ ಎನಿಸಿದ್ದಾರೆ.

2014ರ ಚುನಾವಣೆ

4.85 ಲಕ್ಷ ಬಿಜೆಪಿ ಅಭ್ಯರ್ಥಿಯಾಗಿ ಶತ್ರುಘ್ನ ಸಿನ್ಹಾ ಪಡೆದಿದ್ದ ಮತಗಳು

2.20 ಲಕ್ಷ ಕಾಂಗ್ರೆಸ್‌ನ ಕುನಾಲ್‌ ಸಿಂಗ್ ಪಡೆದಿದ್ದ ಮತಗಳು

91,000 ಜೆಡಿಯು ಅಭ್ಯರ್ಥಿಯಾಗಿ ಗೋಪಾಲ್ ಪ್ರಸಾದ್ ಸಿನ್ಹಾ ಪಡೆದಿದ್ದ ಮತಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.