ನವದೆಹಲಿ: ಉಡುಗೊರೆಗಳು, ಆತಿಥ್ಯ ಮತ್ತು ಉಚಿತ ಪ್ರಚಾರ ಸೇರಿದಂತೆ ವಿವಿಧ ಬಗೆಯ ಆಮಿಷಗಳನ್ನು ತಿರಸ್ಕರಿಸಬೇಕು ಎಂದು ನಾಗರಿಕ ಸೇವೆಗೆ ಇತ್ತೀಚೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಸ್ಸೂರಿ ಮೂಲದ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಆಡಳಿತ ಅಕಾಡೆಮಿ ಶುಕ್ರವಾರ ಮಾರ್ಗಸೂಚಿ ಹೊರಡಿಸಿದೆ.
‘ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳು ತಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತದೆ. ದೇಶದ ನಾಗರಿಕ ಸೇವಕರಾಗಿ ಆಯ್ಕೆಯಾಗಿರುವ ನಿಮ್ಮಗಳ ನಡವಳಿಕೆಯು ನಿರಂತರವಾಗಿ ಸಾರ್ವಜನಿಕರ ಪರಿಶೀಲನೆಗೆ ಒಳಪಟ್ಟಿರುತ್ತದೆ. ಹೀಗಾಗಿ ಈ ನಿಟ್ಟಿನಲ್ಲಿ ಎಚ್ಚರವಹಿಸಿರಿ’ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
‘ಸಾರ್ವಜನಿಕರು, ಜನಪ್ರತಿನಿಧಿಗಳು, ಕಾರ್ಪೊರೇಟ್ ಸಂಸ್ಥೆಗಳು, ನಾಗರಿಕ ಸಮಾಜ ಸಂಸ್ಥೆಗಳು, ಸರ್ಕಾರಿ ಸಿಬ್ಬಂದಿ, ಇತರ ಗಣ್ಯರು ಮತ್ತು ಸಮಾಜದ ದುರ್ಬಲ ವರ್ಗಗಳ ಜತೆ ನಿಮ್ಮ ವೈಯಕ್ತಿಕ, ಅಧಿಕೃತ ಮತ್ತು ಸಾಮಾಜಿಕ ಸಂಪರ್ಕವು ವಿನಯಶೀಲ, ಗೌರವಾನ್ವಿತ ಮತ್ತು ಘನತೆಯಿಂದ ಕೂಡಿರಬೇಕು’ ಎಂದು ತಿಳಿಸಲಾಗಿದೆ.
2024ರ ನಾಗರಿಕ ಸೇವಾ ಪರೀಕ್ಷೆಯ ಮೂಲಕ ಆಯ್ಕೆಯಾದ ಅಭ್ಯರ್ಥಿಗಳನ್ನು ಉದ್ದೇಶಿಸಿ ಈ ಮಾರ್ಗಸೂಚಿ ಪ್ರಕಟಿಸಲಾಗಿದೆ. ಮಂಗಳವಾರ ಪ್ರಕಟವಾದ ಫಲಿತಾಂಶದಲ್ಲಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.