ಮುಂಬೈ: ಮಹಾರಾಷ್ಟ್ರದ ಮುಂಬೈ, ಕರಾವಳಿ ಕೊಂಕಣ ಪ್ರದೇಶ ಸೇರಿದಂತೆ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಏಕನಾಥ ಶಿಂದೆ ಸೂಚಿಸಿದ್ದಾರೆ.
ರಾಜ್ಯ ವಿಪತ್ತು ನಿರ್ವಹಣಾ ಪಡೆ, ಸ್ಥಳೀಯ ಆಡಳಿತ, ನಾಗರಿಕ ಸಂಸ್ಥೆಗಳು ಹಾಗೂ ಪೊಲೀಸರು ಭಾರತೀಯ ಹವಾಮಾನ ಇಲಾಖೆಯಿಂದ ಹವಾಮಾನದ ಕುರಿತು ನಿಯಮಿತವಾಗಿ ಮಾಹಿತಿ ಪಡೆದುಕೊಳ್ಳಬೇಕು. ಅದಕ್ಕನುಗುಣವಾಗಿ ಜನರಿಗೆ ರಕ್ಷಣೆ ಮತ್ತು ಪರಿಹಾರವನ್ನು ಒದಗಿಸಬೇಕು ಎಂದು ಹೇಳಿದ್ದಾರೆ.
ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ನಡೆಸಬೇಕು, ಪ್ರವಾಹ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಅನುಸರಿಸಬೇಕು ಹಾಗೂ ಜಲಾವೃತ ಪ್ರದೇಶಗಳಲ್ಲಿ ಬದಲಿ ಸಂಚಾರ ಮಾರ್ಗ ಒದಗಿಸಬೇಕು. ಹವಾಮಾನ ಇಲಾಖೆ ನೀಡುವ ಮಾಹಿತಿಯನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳಬೇಕು ಎಂದು ಶಿಂದೆ ತಿಳಿಸಿದ್ದಾರೆ.
ಆಹಾರ, ಔಷಧಿ ಮತ್ತು ಪರಿಹಾರ ಸಾಮಾಗ್ರಿಗಳ ದಾಸ್ತಾನು ಸೂಕ್ತ ಪ್ರಮಾಣದಲ್ಲಿ ನಿರ್ವಹಿಸಬೇಕು, ಸಂತ್ರಸ್ತರು ಹಾಗೂ ಪ್ರಾಣಿಗಳಿಗೆ ತಾತ್ಕಾಲಿಕ ಆಶ್ರಯ ಶಿಬಿರಗಳನ್ನು ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.