ಛತ್ರಪತಿ ಸಾಂಬಾಜಿನಗರ: ಗಂಡನನ್ನು ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ ಎಂದು ಬೀಡ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯೊಬ್ಬರು, ವಿಷ ಸೇವಿಸಿದ ಘಟನೆ ಬುಧವಾರ ಜರುಗಿದೆ.
2023ರ ಅಕ್ಟೋಬರ್‌ನಲ್ಲಿ 19ರಂದು ಬೀಡ್ ಜಿಲ್ಲೆಯ ಮಹದೇವ್ ಮುಂಡೆ ಎನ್ನುವ ವ್ಯಕ್ತಿಯು ಕಾಣೆಯಾಗಿದ್ದರು. ಮೂರು ದಿನಗಳ ನಂತರ ಅವರ ಶವ ಪತ್ತೆಯಾಗಿತ್ತು. ಈ ಕುರಿತು ಪ್ರಕರಣ ದಾಖಲಾಗಿತ್ತು. ಆದರೆ, ಇದುವರೆಗೂ ಯಾರನ್ನು ಬಂಧಿಸಲಾಗಿಲ್ಲ. ಹಾಗಾಗಿ, ಆರೋಪಿಗಳನ್ನು ಬಂಧಿಸಬೇಕೆಂದು ಅವರ ಪತ್ನಿ ದ್ಯಾನೇಶ್ವರಿ ಮುಂಡೆ ಅವರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸುತ್ತಿದ್ದರು.
ಘಟನೆಗೂ ಮುನ್ನ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಬಳಿ ಪತ್ರಕರ್ತರೊಂದಿಗೆ ಮಾತನಾಡಿರುವ ದ್ಯಾನೇಶ್ವರಿ ಮುಂಡೆ ‘ಪ್ರಧಾನಿ ನರೇಂದ್ರ ಮೋದಿಯವರು ಆಪರೇಷನ್ ಸಿಂಧೂರ ಕುರಿತು ಮಾತನಾಡುತ್ತಾರೆ. ಆದರೆ, ನನ್ನ ಸಿಂಧೂರಕ್ಕೆ ಏನಾಯಿತು ಎನ್ನುವ ಕುರಿತು ಸರ್ಕಾರವು ಮಾತನಾಡಲಿ’ ಎಂದಿದ್ದರು.
ಇದೇ ವೇಳೆ ವಿಷ ಸೇವನೆ ಮಾಡಿದ್ದು, ದ್ಯಾನೇಶ್ವರಿ ಮುಂಡೆ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಮಹದೇವ್ ಮುಂಡೆ ಅವರ ಪ್ರಕರಣವನ್ನು ಘಟನೆ ನಡೆದ ತಕ್ಷಣವೇ ಸ್ಥಳೀಯ ಕ್ರೈಮ್ ಬ್ರ್ಯಾಂಚ್‌ಗೆ ವರ್ಗಾಯಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.