ADVERTISEMENT

‘ಫ್ಲೀಟ್‌ ಮೋಡ್‌’ನಡಿ ಪರಮಾಣು ವಿದ್ಯುತ್‌ ಸ್ಥಾವರಗಳ ನಿರ್ಮಾಣ

10 ರಿಯಾಕ್ಟರ್‌ಗಳ ನಿರ್ಮಾಣ ಕಾರ್ಯಕ್ಕೆ ಮುಂದಿನ ವರ್ಷ ಚಾಲನೆ

ಪಿಟಿಐ
Published 27 ಮಾರ್ಚ್ 2022, 11:40 IST
Last Updated 27 ಮಾರ್ಚ್ 2022, 11:40 IST
ಕೈಗಾ ಅಣು ವಿದ್ಯುತ್ ಸ್ಥಾವರ (ಸಂಗ್ರಹ ಚಿತ್ರ)
ಕೈಗಾ ಅಣು ವಿದ್ಯುತ್ ಸ್ಥಾವರ (ಸಂಗ್ರಹ ಚಿತ್ರ)   

ನವದೆಹಲಿ: ಅಣು ವಿದ್ಯುತ್‌ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ‘ಫ್ಲೀಟ್‌ ಮೋಡ್‌’ನಡಿ10 ಪರಮಾಣು ರಿಯಾಕ್ಟರ್‌ಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಇವುಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತದೆ ಎಂದು ಅಣುಶಕ್ತಿ ಇಲಾಖೆ (ಡಿಎಇ) ಅಧಿಕಾರಿಗಳು ಹೇಳಿದ್ದಾರೆ.

ರಿಯಾಕ್ಟರ್‌ಗಳ ನಿರ್ಮಾಣ ವೆಚ್ಚ ತಗ್ಗಿಸುವುದು ಹಾಗೂ ಕಡಿಮೆ ಅವಧಿಯಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಕ್ಕೆ ‘ಫ್ಲೀಟ್‌ ಮೋಡ್‌’ ಎನ್ನಲಾಗುತ್ತದೆ.

‘ಫ್ಲೀಟ್‌ ಮೋಡ್‌’ ನಡಿ, ಪರಮಾಣು ವಿದ್ಯುತ್‌ ಸ್ಥಾವರಗಳ ನಿರ್ಮಾಣವನ್ನು, ಕಾರ್ಯ ಆರಂಭಗೊಂಡ ದಿನದಿಂದ ಐದು ವರ್ಷಗಳ ಒಳಗಾಗಿ ಪೂರ್ಣಗೊಳಿಸಲಾಗುತ್ತದೆ. ಈ ರೀತಿಯ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರ ಇದೇ ಮೊದಲ ಬಾರಿಗೆ ಅನುಮೋದನೆ ನೀಡಿದೆ.

ADVERTISEMENT

₹ 1.05 ಲಕ್ಷ ಕೋಟಿ ವೆಚ್ಚದಲ್ಲಿ ದೇಶದ ವಿವಿಧ ಪರಮಾಣು ಸ್ಥಾವರಗಳಲ್ಲಿ 700 ಮೆಗಾವಾಟ್‌ ವಿದ್ಯುತ್‌ ಉತ್ಪಾದನಾ ಸಾಮರ್ಥ್ಯದ ಒಟ್ಟು ಹತ್ತು ಘಟಕಗಳ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟವು 2017ರಲ್ಲಿ ಹಸಿರು ನಿಶಾನೆ ತೋರಿತ್ತು. ಆ ಪೈಕಿ, ಕೈಗಾದ 5 ಮತ್ತು 6ನೇ ಘಟಕಗಳ ನಿರ್ಮಾಣ ಕಾರ್ಯ 2023ರಲ್ಲಿ ಆರಂಭವಾಗಲಿದೆ ಎಂದು ಡಿಎಇ ಅಧಿಕಾರಿಗಳು ಹೇಳಿದ್ದಾರೆ.

ಹರಿಯಾಣದ ಗೋರಖ್‌ಪುರ ಪರಮಾಣು ಸ್ಥಾವರದಲ್ಲಿ ಎರಡು ಘಟಕಗಳ ನಿರ್ಮಾಣ ಕಾರ್ಯ ಮೊದಲು ಆರಂಭವಾಗಲಿದೆ. ನಂತರ ಕೈಗಾ ಘಟಕಗಳ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ರಾಜಸ್ಥಾನದ ಮಾಹಿ ಬಾನ್ಸ್‌ವಾಡಾ ಸ್ಥಾವರದಲ್ಲಿ 4 ಹಾಗೂ ಮಧ್ಯಪ್ರದೇಶದ ಚುಟಕಾ ಸ್ಥಾವರದಲ್ಲಿ 2 ಘಟಕಗಳ ನಿರ್ಮಾಣ ಕಾರ್ಯ 2024ರಲ್ಲಿ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.