ADVERTISEMENT

ಉತ್ತರ ಪ್ರದೇಶ, ಬಿಹಾರದಂತೆ ‘ಮಾಫಿಯಾ ರಾಜ್’‌ ಆಗುತ್ತಿದೆ ಪಶ್ಚಿಮ ಬಂಗಾಳ: ಬಿಜೆಪಿ

ಪಿಟಿಐ
Published 6 ಅಕ್ಟೋಬರ್ 2020, 6:00 IST
Last Updated 6 ಅಕ್ಟೋಬರ್ 2020, 6:00 IST
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್
ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್   

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಸೋಮವಾರ ಆರೋಪಿಸಿದ್ದಾರೆ. ಅಲ್ಲದೆ, ಕ್ರಮೇಣ ಇದು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಮಾಫಿಯಾ ಆಡಳಿತದ ರಾಜ್ಯವಾಗುತ್ತಿದೆ ಎಂದು ಟೀಕಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ತೃಣಮೂಲ ಕಾಂಗ್ರೆಸ್, ಬಿಜೆಪಿ ಅಧಿಕಾರದಲ್ಲಿರುವ ಎರಡು ರಾಜ್ಯಗಳಲ್ಲಿ ಮಾಫಿಯಾ-ರಾಜ್‌ ಅಸ್ತಿತ್ವದಲ್ಲಿದೆ ಎಂದು ಬಿಜೆಪಿ ಒಪ್ಪಿಕೊಂಡಿರುವುದು ಒಳ್ಳೆಯ ಬೆಳವಣಿಗೆ ಎಂದು ವ್ಯಂಗ್ಯವಾಡಿದೆ.

‘ಪಶ್ಚಿಮ ಬಂಗಾಳವು ಉತ್ತರ ಪ್ರದೇಶ ಮತ್ತು ಬಿಹಾರದಂತಹ ಮಾಫಿಯಾ-ರಾಜ್‌ ವ್ಯವಸ್ಥೆಗೆ ಜಾರುತ್ತಿದೆ. ಪೊಲೀಸ್ ಠಾಣೆಯ ಮುಂದೆ ಕೌನ್ಸಿಲರ್‌ನನ್ನು ಗುಂಡಿಕ್ಕಿ ಕೊಂದಿದ್ದು ನಾಚಿಕೆಗೇಡಿನ ಘಟನೆ’ ಎಂದು ಘೋಷ್‌ ಹೇಳಿದರು.

ADVERTISEMENT

24 ಪರಗಣ ಜಿಲ್ಲೆಯ ತಿತಾಗರ್‌ನಲ್ಲಿ ಪೊಲೀಸ್‌ ಠಾಣೆಯ ಎದುರೇ ಬಿಜೆಪಿ ನಾಯಕ ಮನೀಷ್‌ ಶುಕ್ಲಾ ಅವರನ್ನು ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಈ ವಿಷಯವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಘೋಷ್‌, ಪಶ್ಚಿಮ ಬಂಗಾಳವು ಮಾಫಿಯಾ ರಾಜ್ಯವಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ, ‘ಇಂತಹ ಅರಾಜಕ ಪರಿಸ್ಥಿತಿ ಮುಂದುವರಿದರೆ ರಾಜ್ಯದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ಸಾಧ್ಯವೇ’ ಎಂದು ಘೋಷ್ ಪ್ರಶ್ನೆ ಮಾಡಿದ್ದಾರೆ.

‘ಕಳೆದ ಕೆಲವು ವರ್ಷಗಳಲ್ಲಿ ರಾಜ್ಯದಲ್ಲಿ 120 ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರು ಕೊಲೆಯಾಗಿದ್ದಾರೆ,’ ಎಂದು ಅವರು ಹೇಳಿದರು.

ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ಘೋಷ್ ಅವರ ಟೀಕೆಗಳನ್ನು ವ್ಯಂಗ್ಯವಾಡಿದ ಟಿಎಂಸಿ

‘ಬಿಜೆಪಿ ಆಡಳಿತದ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಮಾಫಿಯಾ–ರಾಜ್ ಅಸ್ತಿತ್ವದಲ್ಲಿದೆ ಎಂದು ಘೋಷ್‌ ಅವರು ಒಪ್ಪಿಕೊಂಡಿರುವುದು ಒಳ್ಳೆಯ ಬೆಳವಣಿಗೆ. ಒಮ್ಮೆಯಾದರೂ ಅವರು ಸತ್ಯವನ್ನು ಮಾತನಾಡಿದ್ದಕ್ಕೆ ನಮಗೆ ಸಂತೋಷವಾಗಿದೆ’ ಎಂದು ಟಿಎಂಸಿಯ ಹಿರಿಯ ಮುಖಂಡ ಮತ್ತು ಸಚಿವ ಫಿರ್ಹಾದ್ ಹಕೀಮ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.