ADVERTISEMENT

ಬಲವಂತದ ಮದುವೆಗೆ ಸಿಕ್ಕು ಫಜೀತಿ ಅನುಭವಿಸಿದ ಬೆಂಗಳೂರಿನ ಗೂಗಲ್ ಟೆಕ್ಕಿ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಅಕ್ಟೋಬರ್ 2022, 3:34 IST
Last Updated 17 ಅಕ್ಟೋಬರ್ 2022, 3:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭೋಪಾಲ್‌: ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವಗೂಗಲ್ ಟೆಕ್ಕಿ ಒಬ್ಬರು ಯುವತಿಯ ಸ್ನೇಹ ಬೆಳೆಸಿ, ಆಕೆಯ ಮನೆಯವರ ಕಡೆಯಿಂದ ಫಜೀತಿಗೆ ಸಿಲುಕಿಕೊಂಡಿರುವ ಘಟನೆ ವರದಿಯಾಗಿದೆ.

ಗೂಗಲ್ ಇಂಡಿಯಾದ ಹಿರಿಯ ಮ್ಯಾನೇಜರ್ ಮಧ್ಯಪ್ರದೇಶ ಭೋಪಾಲ್‌ ಮೂಲದ ಗಣೇಶ್ ಶಂಕರ್ ಎನ್ನುವರು, ಶಿಲ್ಲಾಂಗ್‌ನ ಐಐಎಂನಲ್ಲಿ ಎಂಬಿಎ ಓದುವಾಗಭೂಪಾಲ್‌ನ ಸುಜಾತಾ ಎನ್ನುವ ಯುವತಿ ಪರಿಚಯವಾಗಿ ಸ್ನೇಹ ಬೆಳೆಸಿದ್ದರು.ಬಳಿಕ ಇಬ್ಬರೂ ಐದು ವರ್ಷ ಪ್ರೀತಿಯಲ್ಲಿದ್ದರು.

ಇತ್ತೀಚೆಗೆ ಯುವತಿಯನ್ನು ಭೇಟಿಯಾಗಲುಭೋಪಾಲ್‌ಗೆ ಹೋಗಿದ್ದ ಗಣೇಶ್ ಅವರಿಗೆ ಆಶ್ಚರ್ಯ ಕಾದಿತ್ತು.ಹುಡುಗಿ ಮನೆಯವರು ಒಂದೆರಡು ದಿನ ಗಣೇಶನನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಆ ನಂತರ ಹುಡುಗಿ ಮನೆಯವರು ಮತ್ತು ಬರುವ ಔಷಧಿ ನೀಡಿ, ಕತ್ತಲು ಕೋಣೆಯಲ್ಲಿ ಗಣೇಶನನ್ನು ಕೂಡಿ ಹಾಕಿದ್ದರು. ಬಳಿಕ ಗಣೇಶ ಅವರನ್ನು ಬೆದರಿಸಿ ಯುವತಿ ಜೊತೆ ಮದುವೆ ಮಾಡಿಸಿ ಫೋಟೊಗಳನ್ನು ತೆಗೆದಿದ್ದಾರೆ.

ADVERTISEMENT

ಇಷ್ಟೇ ಅಲ್ಲದೇ ಗಣೇಶ್ ಅವರಿಗೆ ಯುವತಿ ಮನೆಯವರು, ‘ನೀನು 40 ಲಕ್ಷ ಕೊಟ್ಟರೇ ಸರಿ, ಇಲ್ಲದಿದ್ದರೇ ನಿನ್ನ ವಿರುದ್ಧ ದೂರು ಕೊಟ್ಟು ಜೈಲಿಗೆ ಕಳಿಸಲಾಗುವುದು’ ಎಂದು ಮತ್ತೊಂದು ಬೆದರಿಕೆ ಹಾಕಿದ್ದಾರೆ.

ಕೊನೆಗೆ ಗಣೇಶ್, ಈ ಬಗ್ಗೆ ಭೂಪಾಲ್‌ನ ಕಮಲಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಯುವತಿ ಹಾಗೂ ಯುವತಿಯ ಮನೆಯ ಮೂವರ ವಿರುದ್ಧ (ಯುವತಿ ಸುಜಾತಾ, ತಂದೆ ಕಮಲೇಶ್ ಸಿಂಗ್, ಸಹೋದರಾದ ಶೈವೇಶ್ ಸಿಂಗ್, ವಿಜೇಂದ್ರ ಕುಮಾರ್) ಐಪಿಸಿ ಸೆಕ್ಷನ್294, 323, 342, 384, 506 ಮತ್ತು 34ರ ಅಡಿ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಗೂಗಲ್ ಟೆಕ್ಕಿ ಗಣೇಶ್ ಅವರು ನೀಡಿದ ದೂರನ್ನು ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ. ಯುವಕ ಗಣೇಶ್ ಕೂಡ ಬೇರೆ ಯುವತಿಯನ್ನು ಈ ಮುಂಚೆ ಮದುವೆಯಾಗಿದ್ದಾನೆಂದು ಸುಜಾತಾ ಮನೆಯವರು ನಮಗೆ ತಿಳಿಸಿದ್ದಾರೆ. ಸುಜಾತಾ ಮನೆಯವರು ಗಣೇಶನಿಂದ ಮೋಸವಾಗಿರುವುದಾಗಿ ಬೆಂಗಳೂರಿನಲ್ಲಿ ದೂರು ದಾಖಲಿಸಿದ್ದಾರೆ’ ಎಂದುಭೋಪಾಲ್‌ ಕಮಲಾ ನಗರ ಪೊಲೀಸ್ ಠಾಣೆ ಅಧಿಕಾರಿ ಅನಿಲ್ ಕುಮಾರ್ ವಾಜಪೇಯಿ ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.