ADVERTISEMENT

ಪಂಜಾಬ್ | ಒಂದೇ ಒಂದು ಪಡಿತರ ಚೀಟಿ ರದ್ದು ಮಾಡಲು ಬಿಡಲ್ಲ: ಭಗವಂತ್‌ ಮಾನ್

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 14:30 IST
Last Updated 23 ಆಗಸ್ಟ್ 2025, 14:30 IST
ಭಗವಂತ್‌ ಮಾನ್, ಪಂಜಾಬ್‌ ಮುಖ್ಯಮಂತ್ರಿ
ಭಗವಂತ್‌ ಮಾನ್, ಪಂಜಾಬ್‌ ಮುಖ್ಯಮಂತ್ರಿ   

ಚಂಡಿಗಢ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಪಂಜಾಬ್‌ನ 8 ಲಕ್ಷಕ್ಕೂ ಹೆಚ್ಚು ಪಡಿತರ ಚೀಟಿದಾರರ ಹೆಸರನ್ನು ತೆಗೆದುಹಾಕಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಯಸಿದೆ. ಆದರೆ ನಮ್ಮ ಸರ್ಕಾರ ಒಂದೇ ಒಂದು ಪಡಿತರ ಚೀಟಿಯನ್ನು ರದ್ದು ಮಾಡಲು ಕೂಡ ಅವಕಾಶ ನೀಡುವುದಿಲ್ಲ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್‌ ಸಿಂಗ್‌ ಮಾನ್‌ ಶನಿವಾರ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, '8,02,493 ಪಡಿತರ ಚೀಟಿದಾರರು ಅರ್ಹ ಫಲಾನುಭವಿಗಳಲ್ಲ; ಅವರ ಹೆಸರನ್ನು ರದ್ದು ಮಾಡಿ’ ಎಂಬ ಕೇಂದ್ರ ಸರ್ಕಾರದ ವರದಿ ನಮ್ಮ ಸರ್ಕಾರಕ್ಕೆ ತಲುಪಿದೆ' ಎಂದು ತಿಳಿಸಿದರು.

ಒಂದು ಕುಟುಂಬದಲ್ಲಿ ನಾಲ್ವರು ಸದಸ್ಯರಿದ್ದಾರೆ ಎಂದರೂ ಕನಿಷ್ಠ 32 ಲಕ್ಷ ಜನರ ಮೇಲೆ ಇದು ಪರಿಣಾಮ ಬೀರಲಿದೆ. ನಾಲ್ಕು ಚಕ್ರದ ವಾಹನ ಹೊಂದಿರುವವರು ಅಥವಾ ಎರಡೂವರೆ ಎಕರೆ ಜಮೀನು ಹೊಂದಿದವರನ್ನು ಹೊರಗಿಡಲು ಸೂಚಿಸಲಾಗಿದೆ. ಕೇಂದ್ರ ಅನುಸರಿಸುತ್ತಿರುವ ಮಾನದಂಡವೇ ಸರಿಯಿಲ್ಲ. ಒಬ್ಬ ಪಡಿತರ ಚೀಟಿದಾರ ಸರ್ಕಾರಿ ನೌಕರಿ ಪಡೆದು ನಗರಕ್ಕೆ ಸ್ಥಳಾಂತರಗೊಂಡರೆ, ಹಳ್ಳಿಯಲ್ಲಿರುವ ಕುಟುಂಬದ ಇತರೆ ಸದಸ್ಯರು ಪಡಿತರ ಪಡೆಯಲು ಅನರ್ಹರೇ ಎಂದು ಮಾನ್ ಪ್ರಶ್ನಿಸಿದರು.

ADVERTISEMENT

‘ಪಂಜಾಬ್‌ನಲ್ಲಿ 1.53 ಕೋಟಿ ಪಡಿತರ ಫಲಾನುಭವಿಗಳಿದ್ದಾರೆ. ಆದರೆ, ಇವರಲ್ಲಿ ಬಹುತೇಕರು ನಕಲಿ ಎಂದು ಕೇಂದ್ರ ಸರ್ಕಾರ ಹೇಳುತ್ತಿದೆ. ಪರಿಶೀಲನೆಗೆ 6 ತಿಂಗಳ ಕಾಲಾವಕಾಶ ಕೇಳಿ ಪತ್ರ ಬರೆದಿದ್ದೇನೆ. ಕೇಂದ್ರದ ಜೊತೆ ಈ ಬಗ್ಗೆ ಚರ್ಚಿಸುವೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.