
ರಾಕೆಟ್ ಉಡಾವಣೆಯ ನೇರಪ್ರಸಾರ ವೀಕ್ಷಿಸುತ್ತ ಭಾವುಕರಾದ ಶುಭಾಂಶು ಶುಕ್ಲಾ ತಂದೆ ಶಂಭು ಶುಕ್ಲಾ ಹಾಗೂ ತಾಯಿ ಆಶಾ ಶುಕ್ಲಾ
– ಪಿಟಿಐ ಚಿತ್ರ
ಲಖನೌ: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅತ್ತ ಅಮೆರಿಕದಿಂದ ಬಾಹ್ಯಾಕಾಶಕ್ಕೆ ಜಿಗಿಯುತ್ತಿದ್ದಂತೆ, ಇತ್ತ ಅವರ ಊರಿನಲ್ಲಿ ಭಾರಿ ಸಂಭ್ರಮ.
ಉತ್ತರ ಪ್ರದೇಶದ ಲಖನೌನಲ್ಲಿ ಬುಧವಾರ ಶುಭಾಂಶು ಅವರಿದ್ದ ರಾಕೆಟ್ ಉಡಾವಣೆಯ ನೇರ ಪ್ರಸಾರ ವೀಕ್ಷಿಸಿದ ಅವರ ಪೋಷಕರು ಮಗನ ಸಾಧನೆ ಕಂಡು ಕ್ಷಣಕಾಲ ಮೂಕವಿಸ್ಮಿತರಾಗಿ ಆನಂದಭಾಷ್ಪ ಸುರಿಸಿದರು.
ಶುಭಾಂಶು ಕುಟುಂಬ ಸದಸ್ಯರು, ಸ್ನೇಹಿತರು, ವಿದ್ಯಾರ್ಥಿಗಳು ಹಾಗೂ ಹಿರಿಯ ರಕ್ಷಣಾ ಸಿಬ್ಬಂದಿ ಸೇರಿದಂತೆ ಅನೇಕರು ಸ್ಥಳದಲ್ಲಿದ್ದರು. ರಾಕೆಟ್ ಉಡಾವಣೆಯಾಗುತ್ತಿದ್ದಂತೆ, ಜನರು ‘ಭಾರತ ಮಾತೆಗೆ ಜಯವಾಗಲಿ, ಹಿಪ್ ಹಿಪ್ ಹುರ್ರೆ’ ಎಂಬ ಹರ್ಷೋದ್ಘಾರದೊಂದಿಗೆ ಚಪ್ಪಾಳೆಯ ಸುರಿಮಳೆಗೈದರು.
ಮಗ ಯಶಸ್ವಿಯಾಗುವನೆಂದು ತಿಳಿದಿತ್ತು ಇವು ನಮ್ಮ ಸಂತೋಷದ ಕಣ್ಣೀರು. ನನ್ನ ಮಗ ಯಶಸ್ವಿಯಾಗುತ್ತಾನೆಂದು ನನಗೆ ತಿಳಿದಿತ್ತು. ಯಶಸ್ವಿ ಕಾರ್ಯಾಚರಣೆಯ ಬಳಿಕ ಅವನು ಹಿಂದಿರುಗುವುದನ್ನು ನಾನು ಎದುರು ನೋಡುತ್ತಿದ್ದೇನೆ. ಅವನು ಭೂಮಿಗೆ ಬಂದ ಬಳಿಕವೂ ನಮ್ಮನ್ನು ಭೇಟಿಯಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಇದು ನಮಗೆ ತುಂಬಾ ಹೆಮ್ಮೆ ಹಾಗೂ ಭಾವುಕ ಕ್ಷಣವಾಗಿದೆ. ನನಗೀಗ ಹೇಳಲೂ ಏನು ಇಲ್ಲ. ತುಂಬಾ ಸಂತೋಷವಾಗುತ್ತಿದೆಆಶಾ ಶುಕ್ಲಾ, ಶುಭಾಂಶು ತಾಯಿ
ನನ್ನ ಆಶಿರ್ವಾದ ಇರುತ್ತದೆ ಇದು ನಮ್ಮ ದೇಶಕ್ಕೆ ಹೆಮ್ಮೆಯ ಕ್ಷಣ. ಈ ಸಮಯದಲ್ಲಿ ಏನು ಹೇಳಬೇಕೆಂದೇ ನನಗೆ ತೋಚುತ್ತಿಲ್ಲ. ಮಗನ ಮೇಲೆ ನನ್ನ ಆಶಿರ್ವಾದ ಸದಾ ಇರುತ್ತದೆಶಂಭು ಶುಕ್ಲಾ, ಶುಭಾಂಶು ತಂದೆ
ಆತ್ಮವಿಶ್ವಾಸದಿಂದ ಇದ್ದ ‘ನಮ್ಮ ತಂದೆ– ತಾಯಿ ಪ್ರಾರ್ಥನೆಯೊಂದಿಗೆ ಈ ದಿನವನ್ನು ಪ್ರಾರಂಭಿಸಿದರು. ಮುಂಜಾನೆ ಶುಭಾಂಶು ಜೊತೆಗೆ ನಾವು ಮಾತನಾಡಿದೆವು. ಬಹಳ ಸಮಯದಿಂದ ಅವನು ಕಾಯುತ್ತಿದ್ದ ಸಮಯ ಕೊನೆಗೂ ಬಂದಿತ್ತು. ಅವನು ಯಾವುದೇ ಒತ್ತಡದಲ್ಲಿರಲಿಲ್ಲ. ಬಹುಷಃ ಸ್ವಲ್ಪ ಗಾಬರಿಗೆ ಒಳಗಾಗಿದ್ದರೂ ಅವನು ಅದನ್ನು ತೋರಿಸಿಕೊಂಡಿಲ್ಲ. ಬಹಳ ಆತ್ಮವಿಶ್ವಾಸದಿಂದ ಇದ್ದ. ಶುಭಾಂಶುವಿನಿಂದ ಪ್ರೇರಿತರಾಗಿ ದೇಶದಾದ್ಯಂತ ಅವನಂತೆ ನೂರಾರು ಜನರು ಬೆಳೆಯಲಿ. ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ವಿಷಯಸುಚಿ ಶುಕ್ಲಾ. ಶುಭಾಂಶು ಸಹೋದರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.