ADVERTISEMENT

ದೆಹಲಿಯಲ್ಲಿ ಬಂದ್‌ ನೀರಸ: ಎಂದಿನಂತೆ ಆಟೊ,ಟ್ಯಾಕ್ಸಿ ಸಂಚಾರ, ವ್ಯಾಪಾರ ಚಟುವಟಿಕೆ

’ರೈತರ ಹೋರಾಟಕ್ಕೆ ಬೆಂಬಲ, ಮುಷ್ಕರದಲ್ಲಿ ಭಾಗವಹಿಸುವುದಿಲ್ಲ' ಆಟೊ ಚಾಲಕರು

ಪಿಟಿಐ
Published 27 ಸೆಪ್ಟೆಂಬರ್ 2021, 6:41 IST
Last Updated 27 ಸೆಪ್ಟೆಂಬರ್ 2021, 6:41 IST
ಭಾರತ್‌ ಬಂದ್‌ ಪ್ರತಿಭಟನೆಯ ಅಂಗವಾಗಿ ಸೋಮವಾರ ದೆಹಲಿಯಲ್ಲಿ ರೈತರು ಗಾಜಿಪುರ್‌ ಗಡಿಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು
ಭಾರತ್‌ ಬಂದ್‌ ಪ್ರತಿಭಟನೆಯ ಅಂಗವಾಗಿ ಸೋಮವಾರ ದೆಹಲಿಯಲ್ಲಿ ರೈತರು ಗಾಜಿಪುರ್‌ ಗಡಿಯಲ್ಲಿ ರಸ್ತೆ ತಡೆ ಪ್ರತಿಭಟನೆ ನಡೆಸಿದರು   

ನವದೆಹಲಿ (ಪಿಟಿಐ): ಭಾರತ್‌ ಬಂದ್‌ಗೆ ರಾಷ್ಟ್ರ ರಾಜಧಾನಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಟೊ ಮತ್ತು ಟ್ಯಾಕ್ಸಿಗಳ ಸಂಚಾರ ಎಂದಿನಂತೇ ಇತ್ತು. ಅಂಗಡಿಗಳು ತೆರೆದಿದ್ದವು. ಆಟೊ, ಟ್ಯಾಕ್ಸಿ, ವ್ಯಾಪಾರಿಗಳ ಸಂಘಟನೆಗಳು ಬಂದ್‌ಗೆ ‘ತಾತ್ವಿಕ ಬೆಂಬಲ’ ನೀಡಿದ್ದು, ಬಂದ್‌ನಲ್ಲಿ ಭಾಗವಹಿಸದಿರಲು ನಿರ್ಧರಿಸಿವೆ.

ಕೋವಿಡ್‌ ಪರಿಣಾಮ ಹಾಗೂ ಲಾಕ್‌ಡೌನ್‌ ಕಾರಣದಿಂದ ಈಗಾಗಲೇ ನಮ್ಮ ಜೀವನಶೈಲಿ ಏರುಪೇರಾಗಿದೆ. ಹೀಗಾಗಿ, ಮುಷ್ಕರದಲ್ಲಿ ನಾವು ಸಕ್ರಿಯವಾಗಿ ಭಾಗವಹಿಸುತ್ತಿಲ್ಲ ಎಂದು ಸಂಘಟನೆಗಳ ಮುಖಂಡರು ಹೇಳಿದ್ದಾರೆ.

ಕೇಂದ್ರ ಸರ್ಕಾರ ತಿದ್ದುಪಡಿ ಮಾಡಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೃಷಿಕ ಸಂಘಟನೆಗಳ ಒಕ್ಕೂಟವಾದ ಸಂಯುಕ್ತ ಕಿಸಾನ್‌ ಮೋರ್ಚಾ ಸೋಮವಾರ ಭಾರತ್ ಬಂದ್‌ಗೆ ಕರೆ ನೀಡಿದೆ.

ADVERTISEMENT

ಈ ಹಿಂದೆಯೂ ನಾವು ಭಾರತ್‌ ಬಂದ್‌ ಬೆಂಬಲಿಸಿದ್ದೆವು. ಆಟೊ, ಟ್ಯಾಕ್ಸಿ ಚಲಾಯಿಸಿದ್ದೆವು. ಈಗಲೂ ಹೋರಾಟ ಬೆಂಬಲಿಸುತ್ತೇವೆ. ಮುಷ್ಕರದಲ್ಲಿ ಭಾಗವಹಿಸುವುದಿಲ್ಲ. ಈಗಾಗಲೇ ಚಾಲಕರು ಕೋವಿಡ್‌ ಕಾರಣದಿಂದ ಕಷ್ಟದಲ್ಲಿದ್ದಾರೆ ಎಂದು ದೆಹಲಿ ಆಟೊ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಂದರ್ ಸೋನಿ ಹೇಳಿದರು.

ವಿವಿಧ ಚಾಲಕರ ಸಂಘಟನೆಗಳನ್ನು ಪ್ರತಿನಿಧಿಸುವ ಸರ್ವೋದಯ ಚಾಲಕರ ಸಂಘಟನೆ ಅಧ್ಯಕ್ಷ ಕಮಲ್‌ಜೀತ್‌ ಗಿಲ್‌ ಅವರು, ನಾವು ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದೇವೆ. ಆದರೆ, ಮುಷ್ಕರದಿಂದ ದೂರ ಉಳಿದಿದ್ದೇವೆ ಎಂದರು.

ರಾಷ್ಟ್ರೀಯ ರಾಜಧಾನಿ ಕ್ಷೇತ್ರ ಆಟೊ ಚಾಲಕರ ಸಂಘಟನೆಯ ಕಾರ್ಯದರ್ಶಿ ಅನುಜ್‌ ರಾಥೋರ್ ಅವರು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿವಿಧ ವ್ಯಾಪಾರಿಗಳು ಕೂಡ ರೈತರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದರೂ, ಅಂಗಡಿಗಳನ್ನು ಬಂದ್‌ ಮಾಡುವ ಸ್ಥಿತಿಯಲ್ಲಿ ಇಲ್ಲ. ಕೋವಿಡ್‌ನ ಪ್ರತಿಕೂಲ ಪರಿಣಾಮದಿಂದ ಈಗಾಗಲೇ ನಾವು ಸಾಕಷ್ಟು ಸಮಸ್ಯೆ ಎದುರಿಸಿದ್ದೇವೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಧ್ಯಕ್ಷ ಬ್ರಿಜೇಶ್ ಗೋಯಲ್‌ ತಿಳಿಸಿದರು.

ಮಾರುಕಟ್ಟೆ, ಮಳಿಗೆಗಳು ಎಂದಿನಂತೆ ಕಾರ್ಯಾರಂಭ ಮಾಡಿವೆ. ಯಾವುದೇ ಪ್ರತಿಭಟನೆ ಸಂದರ್ಭದಲ್ಲಿ ರೈತರು ನಮ್ಮನ್ನು ಸಂಪರ್ಕಿಸಿಲ್ಲ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.