ADVERTISEMENT

ಭಾರತ್ ಬಂದ್: ದೇಶದ ಹಲವೆಡೆ ಪ್ರತಿಭಟನೆ, ದೆಹಲಿ ಗಡಿಗಳಲ್ಲಿ ಬಿಗಿ ಭದ್ರತೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಸೆಪ್ಟೆಂಬರ್ 2021, 4:59 IST
Last Updated 27 ಸೆಪ್ಟೆಂಬರ್ 2021, 4:59 IST
ಭಾರತೀಯ ಕಿಸಾನ್ ಯೂನಿಯನ್ ಸದಸ್ಯರು ಪಟಿಯಾಲದಲ್ಲಿ ರೈಲು ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು – ಪಿಟಿಐ ಚಿತ್ರ
ಭಾರತೀಯ ಕಿಸಾನ್ ಯೂನಿಯನ್ ಸದಸ್ಯರು ಪಟಿಯಾಲದಲ್ಲಿ ರೈಲು ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು – ಪಿಟಿಐ ಚಿತ್ರ   

ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿರುವ ಭಾರತ್ ಬಂದ್‌ ವೇಳೆ ಕರ್ನಾಟಕ ಸೇರಿದಂತೆ ದೇಶದ ಹಲವೆಡೆ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಸಿಂಘು ಗಡಿ ಸೇರಿದಂತೆ ದೆಹಲಿಯ ಗಡಿ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಮೂರು ಗಡಿ ಪ್ರದೇಶಗಳಲ್ಲಿಯೂ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ಪ್ರತಿಭಟನಾಕಾರರು ದೆಹಲಿ ಪ್ರವೇಶಿಸದಂತೆ ತಡೆಯಲಾಗುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

ದೆಹಲಿ ಮೆಟ್ರೊದ ಕೆಲವು ನಿಲ್ದಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಗಿದೆ.

ಹರಿಯಾಣದ ಕುರುಕ್ಷೇತ್ರದಲ್ಲಿ ದೆಹಲಿ–ಅಮೃತಸರ ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆಯೊಡ್ಡಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.

ಘಾಜಿಪುರ, ಸಿಂಘು ಗಡಿಗಳಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ಪಂಜಾಬ್–ಹರಿಯಾಣ ಶಂಭು ಗಡಿಯನ್ನು ಮುಚ್ಚಲಾಗಿದೆ.

ಬಿಹಾರದ ಹಾಜಿಪುರದಲ್ಲಿ ಆರ್‌ಜೆಡಿ ನಾಯಕ ಮುಖೇಶ್ ನೇತೃತ್ವದಲ್ಲಿ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ರಸ್ತೆ ತಡೆ ನಡೆಸಿದ್ದರಿಂದ ಹಾಜಿಪುರ–ಮುಜಪ್ಫರ್‌ಪುರ ನಡುವಣ ಸಂಚಾರಕ್ಕೆ ಅಡ್ಡಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.