ADVERTISEMENT

ಜೋಡೊ ಯಾತ್ರೆಯಲ್ಲಿ ಮೇಧಾ ಪಾಟ್ಕರ್‌ ಭಾಗಿ: ರಾಹುಲ್‌ ವಿರುದ್ಧ ಬಿಜೆಪಿ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ನವೆಂಬರ್ 2022, 2:40 IST
Last Updated 19 ನವೆಂಬರ್ 2022, 2:40 IST
ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿದ್ದ ಮೇಧಾ ಪಾಟ್ಕರ್‌ (ಟ್ವಿಟರ್‌ ಚಿತ್ರ @amitmalviya)
ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿದ್ದ ಮೇಧಾ ಪಾಟ್ಕರ್‌ (ಟ್ವಿಟರ್‌ ಚಿತ್ರ @amitmalviya)   

ನವದೆಹಲಿ: ಭಾರತ್‌ ಜೋಡೊ ಯಾತ್ರೆಯಲ್ಲಿ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್ ಭಾಗಿಯಾಗಿದ್ದಕ್ಕೆ, ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.

ಮೇಧಾ ಪಾಟ್ಕರ್‌ ಅವರೊಂದಿಗೆ ಹೆಜ್ಜೆ ಹಾಕುವ ಮೂಲಕ ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ಅವರು, ಗುಜರಾತ್‌ ಹಾಗೂ ಗುಜರಾತಿಗರ ಮೇಲೆ ಇರುವ ಹಗೆತನವನ್ನು ತೋರ್ಪಡಿಸಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ.

‘ಭಾರತ್‌ ಜೋಡೊ ಯಾತ್ರೆಯಲ್ಲಿ ಮೇಧಾ ಪಾಟ್ಕರ್‌ ಅವರಿಗೆ ಆದ್ಯತೆ ನೀಡುವ ಮೂಲಕ ಕಾಂಗ್ರೆಸ್‌ ಹಾಗೂ ರಾಹುಲ್‌ ಗಾಂಧಿ ಅವರು ಗುಜರಾತ್‌ ಹಾಗೂ ಗುಜರಾತಿಗರ ಮೇಲೆ ಇರುವ ಹಗೆತವನ್ನು ಮತ್ತೊಮ್ಮೆ ತೋರ್ಪಡಿಸಿದ್ದಾರೆ. ದಶಕಗಳ ಕಾಲ ಗುಜರಾತಿಗಳಿಗೆ ನೀರು ನೀಡುವುದನ್ನು ವಿರೋಧಿಸಿದವರ ಪರ ರಾಹುಲ್‌ ಗಾಂಧಿ ನಿಂತಿದ್ದಾರೆ. ಇದನ್ನು ಗುಜರಾತಿಗಳು ಸಹಿಸಿಕೊಳ್ಳುವುದಿಲ್ಲ‘ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.

ADVERTISEMENT

ಸರ್ದಾರ್‌ ಸರೋವರಕ್ಕೆ ಅಣೆಕಟ್ಟು ನಿರ್ಮಾಣ ವಿರೋಧಿಸಿ, ಮೇಧಾ ಪಾಟ್ಕರ್‌ ಅವರು ನರ್ಮದಾ ಬಚಾವೋ ಆಂದೋಲನ ರೂಪಿಸಿದ್ದರು. ಈ ಆಣೆಕಟ್ಟು ನಿರ್ಮಾಣದಿಂದ ಸಾವಿರಾರು ಕುಟುಂಬಗಳು ನೆಲೆ ಕಳೆದುಕೊಳ್ಳುತ್ತವೆ. ಹೀಗಾಗಿ ಈ ಯೋಜನೆಯನ್ನು ಮೇಧಾ ವಿರೋಧಿಸಿ ಜನಾಂದೋಲನ ಮಾಡಿದ್ದರು. 2017ರಲ್ಲಿ ಸರ್ದಾರ್‌ ಸರೋವರ ಡ್ಯಾಂ ಲೋಕಾರ್ಪಣೆಗೊಂಡಿತು.

ಸದ್ಯ ಮಹಾರಾಷ್ಟ್ರದಲ್ಲಿ ರಾಹುಲ್‌ ಗಾಂಧಿಯವರ ಜೋಡೊ ಯಾತ್ರೆ ಸಾಗುತ್ತಿದ್ದು, ವಾಸಿಂ ಎಂಬಲ್ಲಿ ಮೇಧಾ ಪಾಟ್ಕರ್‌ ರಾಹುಲ್‌ ಗಾಂಧಿ ಜತೆ ಹೆಜ್ಜೆ ಹಾಕಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.