ADVERTISEMENT

ಭಾರತ್ ಜೋಡೊ ಯಾತ್ರೆ ಚುನಾವಣಾ ರಾಜಕೀಯವನ್ನು ಮೀರಿದ್ದು: ದಿಗ್ವಿಜಯ್ ಸಿಂಗ್

ಪಿಟಿಐ
Published 23 ನವೆಂಬರ್ 2022, 13:26 IST
Last Updated 23 ನವೆಂಬರ್ 2022, 13:26 IST
   

ಬುರ್ಹಾನ್‌ಪುರ(ಮಧ್ಯಪ್ರದೇಶ): ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ನಡೆಯುತ್ತಿರುವ ಭಾರತ್ ಜೋಡೊ ಯಾತ್ರೆಯು ಚುನಾವಣೆ ರಾಜಕೀಯಕ್ಕೆ ಸಂಬಂಧಿಸಿದ್ದಲ್ಲ. ಅದರ ಪ್ರಮುಖ ಉದ್ದೇಶ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವುದಾಗಿದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.

3,570 ಕಿ.ಮೀ ದೂರದ ಪಾದಯಾತ್ರೆಯ ಸಂಘಟನಾ ಸಮಿತಿಗೆ ದಿಗ್ವಿಜಯ್ ಸಿಂಗ್ ಅಧ್ಯಕ್ಷರಾಗಿದ್ದಾರೆ. ಸೆಪ್ಟೆಂಬರ್ 7ರಂದು ಪ್ರಾರಂಭವಾದ ಯಾತ್ರೆ ಈಗ ಮಹಾರಾಷ್ಟ್ರ ದಾಟಿ ಮಧ್ಯಪ್ರದೇಶಕ್ಕೆ ತಲುಪಿದೆ.

‘ಈ ಯಾತ್ರೆಯಲ್ಲಿ ನಾವು ಮತಗಳನ್ನು ಕೇಳುತ್ತಿಲ್ಲ. ಚುನಾವಣೆಗೆ ಸಂಬಂಧಿಸದ ಕೆಲವು ಅಂಶಗಳು ಇದರಲ್ಲಿವೆ’ಎಂದು ಭಾರತ್ ಜೋಡೊ ಯಾತ್ರೆ ಮಧ್ಯಪ್ರದೇಶ ಪ್ರವೇಶಿಸಿದ ಸ್ಥಳದಲ್ಲಿ ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ADVERTISEMENT

ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಜನರ ಗಮನ ಸೆಳೆಯುವುದು ಈ ಯಾತ್ರೆಯ ಉದ್ದೇಶವಾಗಿದೆ ಎಂದಿದ್ದಾರೆ.

ರಾಹುಲ್ ಗಾಂಧಿ ಅವರನ್ನು ಇರಾಕಿನ ಮಾಜಿ ಸರ್ವಾಧಿಕಾರಿ ಸದ್ದಾಂ ಹುಸೇನ್ ಅವರಿಗೆ ಹೋಲಿಸಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಹೇಳಿಕೆಯನ್ನು ಸಿಂಗ್ ತೀವ್ರವಾಗಿ ಖಂಡಿಸಿದ್ಧಾರೆ.

ಶರ್ಮಾ ಹೆಸರು ತೆಗೆದುಕೊಳ್ಳದೆ, ನಮ್ಮ ಪಕ್ಷದಲ್ಲಿದ್ದಾಗ ಪಕ್ಷದ ನಾಯಕರ ಕಾಲಿಗೆ ಬೀಳುತ್ತಿದ್ದ ಅದೇ ವ್ಯಕ್ತಿ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 2015ರಲ್ಲಿ ಶರ್ಮಾ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು.

ಭಾರತ್ ಜೋಡೊ ಯಾತ್ರೆಯಿಂದಾಗಿ ಗುಜರಾತ್ ಚುನಾವಣೆ ಕಾಂಗ್ರೆಸ್ ಪಕ್ಷ ಸಕ್ರಿಯವಾಗಿ ಭಾಗವಹಿಸುತ್ತಿಲ್ಲ ಎಂಬುದು ತಪ್ಪು ಕಲ್ಪನೆ. ನಮ್ಮ ಪಕ್ಷದ ಗುಜರಾತ್ ಘಟಕವು ಸಕ್ರಿಯವಾಗಿ ಪಾಲ್ಗೊಂಡಿದೆ. ಪಕ್ಷದ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮತ್ತು ನಾನು ಚುನಾವಣಾ ಪ್ರಚಾರಕ್ಕೂ ಹೋಗಿ ಬಂದಿದ್ದೇವೆ ಎಂದು ದಿಗ್ವಿಜಯ್ ಸಿಂಗ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.