ADVERTISEMENT

ಗಡ್ಡಧಾರಿಗಳ ಬಗ್ಗೆ ಅಪಹಾಸ್ಯ ಮಾಡಿದ ಆರೋಪ; ನಟಿ ಭಾರ್ತಿ ಸಿಂಗ್ ವಿರುದ್ಧ ಎಫ್‌ಐಆರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಮೇ 2022, 10:40 IST
Last Updated 17 ಮೇ 2022, 10:40 IST
ಹಾಸ್ಯನಟಿ ಭಾರ್ತಿ ಸಿಂಗ್‌
ಹಾಸ್ಯನಟಿ ಭಾರ್ತಿ ಸಿಂಗ್‌   

ಜಲಂಧರ್‌ (ಪಂಜಾಬ್‌): ಗಡ್ಡಧಾರಿಗಳ ಕುರಿತು ಅಪಹಾಸ್ಯ ಮಾಡಿದ ಆರೋಪದ ಮೇಲೆ ನಟಿ ಭಾರ್ತಿ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಜಲಂಧರ್‌ನಅದಂಪುರ ಪೊಲೀಸ್‌ ಠಾಣೆಯಲ್ಲಿ 'ರವಿದಾಸ್‌ ಟೈಗರ್‌ ಫೋರ್ಸ್‌'ನ ಮುಖ್ಯಸ್ಥ ಜಸ್ಸಿ ತಲ್ಲಾನ್ ಅವರು ನೀಡಿರುವ ದೂರಿನ ಆಧಾರದಲ್ಲಿಪ್ರಕರಣ ದಾಖಲಾಗಿದೆ.

ಭಾರ್ತಿ ಅವರು ಹಳೇ ವಿಡಿಯೊವೊಂದರಲ್ಲಿ ಸಿಖ್ಖರ ಮೀಸೆ ಮತ್ತು ಗಡ್ಡದ ಕುರಿತು ಅಪಹಾಸ್ಯ ಮಾಡಿದ್ದಾರೆ. ಆ ಮೂಲಕಸಿಖ್‌ ಸಮುದಾಯದವರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಭಾರ್ತಿ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‌ 295–ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶದ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದೀಗ, ಅಮೃತಸರದಲ್ಲಿರುವ 'ಶಿರೋಮಣಿ ಗುರುದ್ವಾರ ಪರ್ಬಂಧಕ್‌ ಸಮಿತಿ'ಯೂ ಸೋಮವಾರ ದೂರು ದಾಖಲಿಸಿದೆ ಎಂದು ವರದಿಯಾಗಿದೆ.

ADVERTISEMENT

ವಿವಾದ ಸೃಷ್ಟಿ ಬಳಿಕ ಭಾರ್ತಿ ಅವರ ಹಳೇ ವಿಡಿಯೊ ವೈರಲ್‌ ಆಗಿದೆ. ಆ ವಿಡಿಯೊದಲ್ಲಿ 'ಗಡ್ಡ, ಮೀಸೆಯಿಂದ ಸಾಕಷ್ಟು ಲಾಭಗಳಿವೆ. ಹಾಲು ಕುಡಿಯಿರಿ ಮತ್ತು ಗಡ್ಡವನ್ನು ತೆಗೆದು ಬಾಯಿಗೆ ಹಾಕಿಕೊಳ್ಳಿ. ರುಚಿಯಲ್ಲಿ ಅದು ಶಾವಿಗೆಗಿಂತೇನೂ ಕಡಿಮೆಯಿಲ್ಲ' ಎಂದಿದ್ದಾರೆ ಎನ್ನಲಾಗಿದೆ.

ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವಭಾರ್ತಿ, ಕ್ಷಮೆ ಯಾಚಿಸಿ ಮತ್ತೊಂದು ವಿಡಿಯೊವನ್ನುಹಂಚಿಕೊಂಡಿದ್ದಾರೆ. ಯಾವುದೇ ಸಮುದಾಯದವರಿಗೆ ನೋವುಂಟು ಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.