ADVERTISEMENT

ವಾರಾಣಸಿಯಲ್ಲಿ ಸ್ಪರ್ಧಿಸದಿರಲು ರಾವಣ ತೀರ್ಮಾನ; ಮಹಾಘಟಬಂಧನಕ್ಕೆ ಬೆಂಬಲ

ಏಜೆನ್ಸೀಸ್
Published 17 ಏಪ್ರಿಲ್ 2019, 14:17 IST
Last Updated 17 ಏಪ್ರಿಲ್ 2019, 14:17 IST
   

ನವದೆಹಲಿ: ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಉತ್ತರ ಪ್ರದೇಶದ ವಾರಾಣಸಿಯಿಂದ ಸ್ಪರ್ಧಿಸುವುದಾಗಿ ಹೇಳಿದ್ದ ‘ಭೀಮ್‌ ಆರ್ಮಿ’ಯ ಸಂಸ್ಥಾಪಕ, ಚಂದ್ರಶೇಖರ ಆಜಾದ್‌ (ರಾವಣ) ಈಗ ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಘೋಷಿಸಿದ್ದಾರೆ. ಅಲ್ಲದೆ, ದಲಿತ ಮತಗಳು ಚದುರದಂತೆ ಮಾಡಲು ಅವರ ಸಂಘಟನೆಯು ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಕೂಟವನ್ನು ಬೆಂಬಲಿಸಲಿದೆ ಎಂದು ಘೋಷಿಸಿದ್ದಾರೆ.

ವಾರಾಣಸಿ ಕ್ಷೇತ್ರದಿಂದ ಮಾಯಾವತಿ ಅವರು ತಮ್ಮ ಆಪ್ತ, ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸತೀಶ್‌ ಚಂದ್ರ ಮಿಶ್ರಾ ಅವರಿಗೆ ಟಿಕೆಟ್‌ ನೀಡಿದರೆ ಅವರಿಗೆಬೆಂಬಲ ನೀಡುವುದಾಗಿಯೂ ರಾವಣ ತಿಳಿಸಿದ್ದಾರೆ. ಸತೀಶ್‌ ಚಂದ್ರ ಅವರನ್ನು ಕಣಕ್ಕಿಳಿಸಿದರೆ, ಮೇಲ್ವರ್ಗದ ಮತಗಳನ್ನೂ ಪಡೆಯಬಹುದು ಎಂದು ರಾವಣ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಸತೀಶ್‌ ಚಂದ್ರ ಅವರನ್ನು ಟೀಕೆ ಮಾಡಿದ್ದ ರಾವಣ, ‘ಮಾಯಾವತಿ ಅವರನ್ನು ದಿಕ್ಕು ತಪ್ಪಿಸಿ ಸತೀಶ್‌ ಚಂದ್ರ ಅವರು ದಲಿತರನ್ನು ತುಳಿಯುತ್ತಿದ್ದಾರೆ,’ ಎಂದು ಆರೋಪಿಸಿದ್ದರು.

ಇನ್ನು ತಾವುಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದರ ಕುರಿತು ಮಾತನಾಡಿರುವ ರಾವಣ,‘ನಾನು ಸ್ಪರ್ಧೆ ಮಾಡುವ ಕಾರಣಕ್ಕೆ ವಾರಾಣಸಿಯಲ್ಲಿಮೋದಿಯಾಗಲಿ, ಬಿಜೆಪಿಯಾಗಲಿ ಶಕ್ತಿ ಪಡೆದುಕೊಳ್ಳಬಾರದು. ಬಿಜೆಪಿಯನ್ನು ಸೋಲಿಸುವುದೇ ನಮ್ಮೆಲ್ಲರ ಗುರಿ,’ ಎಂದು ಹೇಳಿದ್ದಾರೆ.

ADVERTISEMENT

ವಾರಾಣಸಿಯಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ರಾವಣ ಅವರನ್ನು ಬಿಜೆಪಿ ಏಜೆಂಟ್‌ ಎಂದು ಮಾಯಾವತಿ ಇತ್ತೀಚೆಗಷ್ಟೇ ಟೀಕಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಅವರು, ‘ನಮ್ಮ ಜನರೇ ನನ್ನನ್ನು ಏಜೆಂಟ್‌ ಎಂದು ಕರೆಯುತ್ತಾರೆ. ಆದರೆ, ಮಾಯಾವತಿ ಅವರು ಪ್ರಧಾನಿಯಾಗಬೇಕೆಂದು ನಾನು ಬಯಸುತ್ತೇನೆ,’ ಎಂದು ರಾವಣ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.