
ಧಾರ್: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ–ಕಮಲ್ ಮೌಲಾ ಮಸೀದಿಯಲ್ಲಿ ವಸಂತ ಪಂಚಮಿ ದಿನವಾದ ಶುಕ್ರವಾರ ಹಿಂದೂಗಳು ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿದರೆ, ಮತ್ತೊಂದೆಡೆ ಮುಸ್ಲಿಮರು ನಮಾಜ್ ಮಾಡಿದರು.
ಈ ಮೂಲಕ ವಿವಾದಿತ ಸ್ಥಳದಲ್ಲಿ ಎರಡೂ ಧರ್ಮದವರು ಶಾಂತಿ–ಸುವ್ಯವಸ್ಥೆಯನ್ನು ಕಾಪಾಡಿದರು. ಅಹಿತಕರವಾದ ಮತ್ತು ಶಾಂತಿ ಭಂಗವಾಗುವ ಯಾವುದೇ ಘಟನೆ ನಡೆದಿಲ್ಲ.
ಬಿಗಿ ಭದ್ರತೆಯ ನಡುವೆ ಮುಂಜಾನೆ ಪೂಜೆ ಆರಂಭಿಸಿದ ಹಿಂದೂಗಳು ಸಂಜೆಯವರೆಗೆ ಪೂಜೆ ನಡೆಸಿದರು. ಮುಸ್ಲಿಮರು ಮಧ್ಯಾಹ್ನ 1ರಿಂದ 3 ಗಂಟೆವರೆಗಿನ ಅವಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು ಎಂದು ಜಿಲ್ಲಾಡಳಿತ ತಿಳಿಸಿದೆ.
ಪ್ರತಿ ಮಂಗಳವಾರ ಹಿಂದೂಗಳ ಪೂಜೆಗೆ ಮತ್ತು ಶುಕ್ರವಾರ ಮುಸ್ಲಿಮರ ಪ್ರಾರ್ಥನೆಗೆ ಭಾರತೀಯ ಪುರಾತತ್ವ ಇಲಾಖೆಯು 2003ರಿಂದ ಅವಕಾಶ ಕಲ್ಪಿಸಿದೆ. ಆದರೆ, ಈ ಬಾರಿ ವಸಂತ ಪಂಚಮಿಯು ಶುಕ್ರವಾರ ಇದ್ದುದರಿಂದ ಆ ದಿನ ಪೂಜೆಗೆ ಅವಕಾಶ ಕೋರಿ ಹಿಂದೂ ಸಂಘಟನೆಗಳು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದವು.
ಅಹಿತಕರ ಘಟನೆಯನ್ನು ತಡೆಯುವ ನಿಟ್ಟಿನಲ್ಲಿ ಹಿಂದೂ ಮತ್ತು ಮುಸ್ಲಿಮರ ಆಚರಣೆಗಳಿಗೆ ಸಮಯ ಹಂಚಿಕೆ ಮಾಡಿ ಸುಪ್ರೀಂ ಕೋರ್ಟ್ ಗುರುವಾರ ಅದೇಶ ಹೊರಡಿಸಿತ್ತು. ಪೊಲೀಸರು ಮತ್ತು ಭದ್ರತಾ ಪಡೆಗಳು ತೀವ್ರ ನಿಗಾ ವಹಿಸಿದ್ದವು. 8000 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಭೋಜಶಾಲಾ ಸರಸ್ವತಿ ದೇವಿಯ ದೇಗುಲ ಎಂಬುದು ಹಿಂದೂಗಳ ನಂಬಿಕೆಯಾಗಿದೆ. ಮುಸ್ಲಿಂ ಸಮುದಾಯವು ಈ ಕಟ್ಟಡ ಕಮಲ್ ಮೌಲಾ ಮಸೀದಿ ಎಂದು ಪರಿಗಣಿಸಿದೆ. ಈ ವಿವಾದದ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.