ಬಂಧನ
(ಪ್ರಾತಿನಿಧಿಕ ಚಿತ್ರ)
ಲಖನೌ: ತಮ್ಮನ್ನು ವಿಭಾಗ ಮಖ್ಯಸ್ಥ (ಎಚ್‌ಒಡಿ) ಹುದ್ದೆಯಿಂದ ಬದಲಿಸಿದ್ದಾರೆ ಎಂಬ ಕಾರಣಕ್ಕೆ ಕೆರಳಿದ ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್‌ಯು) ಪ್ರಾಧ್ಯಾಪಕರೊಬ್ಬರು, ಇದಕ್ಕೆ ಕಾರಣವಾದ ವಿಭಾಗದ ಮುಖ್ಯಸ್ಥರನ್ನೇ ಸುಪಾರಿ ನೀಡಿ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂಬ ಸಂಗತಿ ಪೊಲೀಸ್ ತನಿಖೆಯಿಂದ ಬಹಿರಂಗಗೊಂಡಿದೆ.
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ತೆಲುಗು ವಿಭಾಗದ ಮಾಜಿ ಮುಖ್ಯಸ್ಥ ಬುಡತಿ ವೆಂಕಟೇಶ್ವರಲು, ತಮ್ಮನ್ನು ‘ಎಚ್‌ಒಡಿ’ ಸ್ಥಾನದಿಂದ ಕೆಳಗಿಳಿಸಿದ ಸಿ.ಎಸ್. ರಾಮಚಂದ್ರ ಮೂರ್ತಿ ಅವರನ್ನು ಕೊಲೆ ಮಾಡಲು ಸುಪಾರಿ ನೀಡಿದ್ದರು. ಇದಕ್ಕಾಗಿ ತಮ್ಮ ಬಳಿ ಈ ಹಿಂದೆ ಸಂಶೋಧನೆ ಕೈಗೊಂಡಿದ್ದ ವಿದ್ಯಾರ್ಥಿಯೂ ಸೇರಿ ಕೆಲವರ ನೆರವು ಪಡೆದುಕೊಂಡಿದ್ದರು.
ಸಿ.ಎಸ್. ರಾಮಚಂದ್ರ ಮೂರ್ತಿ ಅವರ ಮೇಲೆ ನಡೆದಿದ್ದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವು ದಿನಗಳ ಹಿಂದೆ ತೆಲಂಗಾಣದ ನಿವಾಸಿ, ಸಂಶೋಧನಾ ವಿದ್ಯಾರ್ಥಿ ಬಿ. ಭಾಸ್ಕರ್ ಮತ್ತು ಸಹಚರರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಸುಪಾರಿ ನೀಡಿದ್ದ ಮಾಹಿತಿ ಬಹಿರಂಗಗೊಂಡಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 9 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಪ್ರಮುಖ ಆರೊಪಿ ಬುಡತಿ ವೆಂಕಟೇಶ್ವರಲು ಅವರನ್ನು ಶೀಘ್ರದಲ್ಲೇ ವಶಕ್ಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೈಸೂರು ವಿ.ವಿ ಪ್ರಾಧ್ಯಾಪಕನೂ ಭಾಗಿ?
ಈ ಪ್ರಕರಣದಲ್ಲಿ ಮೈಸೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಖಾಸೀಂ ಬಾಬು ಅವರ ಪಾತ್ರದ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಖಾಸೀಂ ಬಾಬು ಅವರನ್ನು ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ನೇಮಕ ಮಾಡಿಕೊಳ್ಳಲು ವೆಂಕಟೇಶ್ವರಲು ಪ್ರಯತ್ನ ನಡೆಸಿದ್ದರು.
ಕೊಲೆಗೆ ಸಂಚು ರೂಪಿಸಿದ್ದ ಆರೋಪಿಗಳಾದ ಭಾಸ್ಕರ್ ಮತ್ತು ಖಾಸೀಂ ಬಾಬು ವಾರಾಣಾಸಿಗೆ ವಿಮಾನದಲ್ಲಿ ಬಂದು, ಬನಾರಸ್ ಹಿಂದೂ ವಿವಿಗೆ ಸಮೀಪದಲ್ಲಿದ್ದ ಲಂಕಾ ಪ್ರದೇಶದಲ್ಲಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಕೃತ್ಯ ನಡೆಸಲು ಪ್ರಮೋದ್ ಎಂಬ ಸ್ಥಳೀಯ ವ್ಯಕ್ತಿ ಸೇರಿ ಕೆಲವು ಗೂಂಡಾಗಳ ನೆರವು ಪಡೆದುಕೊಂಡಿದ್ದರು.
ಜುಲೈ 28ರಂದು ರಾಮಚಂದ್ರ ಮೂರ್ತಿ ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಅವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಅವರು ಬಿಎಚ್‌ಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.