ADVERTISEMENT

ವಾರಾಣಸಿ: 4,000 ವರ್ಷಗಳ ಗ್ರಾಮ ಪತ್ತೆ

ಪಿಟಿಐ
Published 23 ಫೆಬ್ರುವರಿ 2020, 19:39 IST
Last Updated 23 ಫೆಬ್ರುವರಿ 2020, 19:39 IST

ನವದೆಹಲಿ : 4,000 ವರ್ಷಗಳ ಇತಿಹಾಸವಿರುವ ಗ್ರಾಮವನ್ನು ವಾರಾಣಸಿಯ ಬನಾರಸ್‌ ಹಿಂದೂ ವಿಶ್ವವಿದ್ಯಾಲಯದ ಪ್ರಾಚ್ಯ ಇತಿಹಾಸ ವಿಭಾಗದ ತಂಡ ಪತ್ತೆ ಮಾಡಿದೆ.

ವಾರಣಸಿಯಿಂದ 13 ಕಿ.ಮೀ ಬಭಾನಿಯಾವ್ ಗ್ರಾಮದ ಬಳಿ ಉತ್ಖನನ ಮಾಡಲಾಗಿದ್ದು, ನಗರ ಯೋಜನೆಯ ಮಾದರಿಯಲ್ಲಿ ಗ್ರಾಮವನ್ನು ನಿರ್ಮಿಸಲಾಗಿದೆ.

‘ಇದು ಕರಕುಶಲ ವಸ್ತುಗಳನ್ನು ತಯಾರಿಸುವ ಗ್ರಾಮವಾಗಿದೆ. ಪ್ರಾಚೀನ ಸಾಹಿತ್ಯ ಗ್ರಂಥಗಳಲ್ಲಿ ಈ ಗ್ರಾಮದ ಬಗ್ಗೆ ಉಲ್ಲೇಖವಿದೆ. ಉತ್ಖನನದಲ್ಲಿ ಸ್ತಂಭ ದೊರೆತಿದ್ದು, ಕುಶಾನರ ಕಾಲದ ಬ್ರಾಹ್ಮಿ ಲಿಪಿಯಲ್ಲಿ ಎರಡು ಸಾಲುಗಳನ್ನು ಬರೆಯಲಾಗಿದೆ’ ಎಂದು ತಂಡದ ಹಿರಿಯ ಸಂಶೋಧಕರೊಬ್ಬರು ತಿಳಿಸಿದ್ದಾರೆ.

ADVERTISEMENT

ಕ್ರಿ.ಶ. 5 ಮತ್ತು 8ನೇ ಶತಮಾನಕ್ಕೆ ಸೇರಿದ ಎರಡು ದೇವಾಲಯಗಳೂ ಈ ಗ್ರಾಮದಲ್ಲಿವೆ. ಉತ್ಖನನ ಪ್ರದೇಶದಲ್ಲಿ ಸಿಕ್ಕಿರುವ ಮಡಿಕೆಗಳು 4000 ವರ್ಷಗಳಷ್ಟು ಮತ್ತು ಮನೆಯ ಗೋಡೆಗಳು 2000 ವರ್ಷಗಳಷ್ಟು ಹಳೆಯ
ದಾಗಿವೆ ಎಂದು ವಿಭಾಗದ ಮುಖ್ಯಸ್ಥ ಎ.ಕೆ.ದುಬೇ ಅವರು ಮಾಹಿತಿ ನೀಡಿದ್ದಾರೆ.

ವಾರಾಣಸಿ ಸಮೀಪದಲ್ಲಿಯೇ ಗ್ರಾಮವಿರುವುದರಿಂದ 5000 ವರ್ಷಗಳ ಹಿಂದೆ ಶಿವನಿಂದ ಸ್ಥಾಪಿತವಾದ ಗ್ರಾಮ ಎಂಬ ನಂಬುಗೆ ಇದೆ. ಆದರೆ, ಈ ಗ್ರಾಮವನ್ನು 3,000 ವರ್ಷಗಳ ಹಿಂದೆ ನಿರ್ಮಿಸಿರಬಹುದು ಎಂಬುದು ಆಧುನಿಕ ಇತಿಹಾಸಕಾರರ ಅಭಿಪ್ರಾಯವಾಗಿದೆ ಎಂದು ಅವರು ವಿವರಿಸಿದ್ದಾರೆ.

ಸಾರನಾಥ– ವಾರಾಣಸಿ ಮಧ್ಯೆ ಬಭಾನಿಯಾವ್ ಗ್ರಾಮವಿದೆ. ಸಾರನಾಥ, ತಿಲ್ಮಾಪುರ, ರಾಮನಗರ ಮತ್ತು ಇತರ ಪ್ರದೇಶಗಳಲ್ಲಿ ಈ ಹಿಂದೆ ಉತ್ಖನನ ನಡೆಸಲಾಗಿತ್ತು. ಇದೀಗಬಭಾನಿಯಾವ್ ಗ್ರಾಮದಲ್ಲಿ ಸುಮಾರು 5 ಮೀ. ಆಳದವರೆಗೆ ಉತ್ಖನನ ನಡೆಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.