ADVERTISEMENT

ಬಿಹಾರದಲ್ಲೀಗ ಭಿಕ್ಷುಕರೂ ಆಯ್ಕೆಗಾರರಾಗಬಹುದು!

ಬಿಹಾರ: ವ್ಯಾಪಾರ ಮಾಡಲು ಭಿಕ್ಷುಕರಿಗೆ ಸರ್ಕಾರದಿಂದ ಉತ್ತೇಜನ

​ಪ್ರಜಾವಾಣಿ ವಾರ್ತೆ
Published 31 ಜನವರಿ 2021, 16:08 IST
Last Updated 31 ಜನವರಿ 2021, 16:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಏಪ್ರಿಲ್ ವೇಳೆಗೆ ನೀವೇನಾದರೂ ಬಿಹಾರಕ್ಕೆ ಹೋದರೆ, ಅಲ್ಲಿನ ದೇವಾಲಯಗಳ ಬಾಗಿಲುಗಳಲ್ಲಿ ಭಿಕ್ಷುಕರನ್ನು ಕಾಣದಿರುವ ಸಾಧ್ಯತೆಯೇ ಹೆಚ್ಚು. ಏಕೆಂದರೆ ಮಾರ್ಚ್ 2021ರೊಳಗೆ ಭಿಕ್ಷುಕರ ಮುಕ್ತ ರಾಜ್ಯವನ್ನಾಗಿಸಲು ಬಿಹಾರ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ.

ರಾಜಧಾನಿಯಲ್ಲೇ ಸುಮಾರು 2,200 ಭಿಕ್ಷುಕರನ್ನು ಗುರುತಿಸಿರುವ ಸರ್ಕಾರ, ಭಿಕ್ಷುಕರಿಗಾಗಿ ಅವರ ಆಯ್ಕೆಯ ವ್ಯಾಪಾರ ಮಾಡಲು ಆರ್ಥಿಕ ನೆರವು ನೀಡಲು ಮುಂದಾಗಿದೆ.

ಭಿಕ್ಷುಕರಿಗೆ ಪುನರ್ವಸತಿ ಕಲ್ಪಿಸಲು ಮುಂದಾಗಿರುವ ಸರ್ಕಾರ, ಅವರಿಗೆ ಆಧಾರ್ ಕಾರ್ಡ್ ನೀಡುತ್ತಿದ್ದೆ. ಇದು ಭಿಕ್ಷುಕರು ತಮ್ಮ ಬ್ಯಾಂಕ್ ಖಾತೆಗಳನ್ನು ತೆರೆಯಲು ನೆರವಾಗಲಿದೆ.

ADVERTISEMENT

‘ತಾವಾಗಿಯೇ ವ್ಯಾಪಾರ–ವಹಿವಾಟು ಆರಂಭಿಸುವ ಭಿಕ್ಷುಕರಿಗೆ ₹ 10 ಸಾವಿರ ಹಣಕಾಸಿನ ನೆರವು ನೀಡುತ್ತದೆ. ಹಣ್ಣು–ತರಕಾರಿ ಮಾರಾಟ, ವೃತ್ತಪತ್ರಿಕೆ ಮಾರಾಟ, ಹಾಲು ಮಾರಾಟ ಹೀಗೆ ಯಾವ ಕೆಲಸವನ್ನಾದರೂ ಅವರು ಮಾಡಬಹುದು’ ಎಂದು ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯೊಂದಿಗೆ ಕೆಲಸ ಮಾಡುವ ‘ಸಾಕ್ಷಂ’ ಸಂಘಟನೆಯ ಹಿರಿಯ ಅಧಿಕಾರಿ ರಣಧೀರ್ ಕುಮಾರ್ ಮಾಹಿತಿ ನೀಡಿದರು.

ಈ ಯೋಜನೆಯು ಮೂಲತಃ ಮುಖ್ಯಮಂತ್ರಿ ನಿತೇಶ್ ಕುಮಾರ್ ಅವರ ಪರಿಕಲ್ಪನೆಯಾಗಿದೆ. ಇದನ್ನು ಸಮಾಜ ಕಲ್ಯಾಣ ಸಚಿವ ಅಶೋಕ್ ಚೌಧರಿ ಅವರು ತಮ್ಮ ಇಲಾಖೆಯ ಮೂಲಕ ಕಾರ್ಯಗತಗೊಳಿಸುತ್ತಿದ್ದಾರೆ.

‘ಇದು ಮುಖ್ಯಮಂತ್ರಿ ಅವರ ಭಿಕ್ಷಾವೃತ್ತಿ ನಿವಾರಣ್ ಯೋಜನೆಯ ಭಾಗವಾಗಿದೆ. ಭಿಕ್ಷೆ ಬೇಡುವುದನ್ನು ನಿಲ್ಲಿಸಲು ಮತ್ತು ಸ್ವಂತ ಉದ್ಯಮವನ್ನು ಪ್ರಾರಂಭಿಸಲು ನಾವು ಭಿಕ್ಷಕುರನ್ನು ಪ್ರೇರೇಪಿಸುತ್ತಿದ್ದೇವೆ’ ಎಂದು ಸಮಾಜ ಕಲ್ಯಾಣ ಸಚಿವ ಅಶೋಕ್ ಚೌಧರಿ ಹೇಳಿದ್ದಾರೆ.

ಮೂಲಗಳ ಪ್ರಕಾರ, ಇದುವರೆಗೆ 18 ಭಿಕ್ಷುಕರಿಗೆ ಆಧಾರ್ ಕಾರ್ಡ್ ನೀಡಿ, ಬ್ಯಾಂಕ್ ಅಕೌಂಟ್ ಆರಂಭಿಸಿ ಸ್ವಂತ ವ್ಯಾಪಾರ ನಡೆಸಲು ₹ 10 ಸಾವಿರ ನೀಡಲಾಗಿದೆ.

‘ಇವರಲ್ಲಿ ಕೆಲವರು ತರಕಾರಿ ವ್ಯಾಪಾರ ಮಾಡಲು ಮತ್ತೆ ಕೆಲವರು ಮೊಟ್ಟೆ ಮತ್ತು ಹಾಲು ಮಾರಾಟದಲ್ಲಿ ತೊಡಗಿಸಿಕೊಳ್ಳಲು ಇಚ್ಛಿಸಿದ್ದಾರೆ. ಆದರೂ ಬಹುತೇಕರು ಭಿಕ್ಷಾಟನೆಯಂಥ ಕೆಲಸವನ್ನು ತ್ಯಜಿಸಲು ಬಯಸುತ್ತಿಲ್ಲ. ಏಕೆಂದರೆ ಭಿಕ್ಷಾಟನೆ ಯಾವುದೇ ಶ್ರಮವಿಲ್ಲದೇ ಲಾಭ ನೀಡುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.