ADVERTISEMENT

ಬಿಹಾರ: ಎರಡನೇ ಹಂತದ ಮತದಾನ ಆರಂಭ, ತೇಜಸ್ವಿ ಯಾದವ್, ತೇಜ್ ಪ್ರತಾಪ್ ಕಣದಲ್ಲಿ

ಏಜೆನ್ಸೀಸ್
Published 3 ನವೆಂಬರ್ 2020, 4:05 IST
Last Updated 3 ನವೆಂಬರ್ 2020, 4:05 IST
ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಖಗರಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು – ಎಎನ್‌ಐ ಚಿತ್ರ
ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ಖಗರಿಯಾದ ಮತಗಟ್ಟೆಯಲ್ಲಿ ಮತ ಚಲಾಯಿಸಿದರು – ಎಎನ್‌ಐ ಚಿತ್ರ   

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮಂಗಳವಾರ ಬೆಳಿಗ್ಗೆ ಆರಂಭಗೊಂಡಿದೆ. ಮಹಾಘಟಬಂಧನದ ಮುಖ್ಯಮಂತ್ರಿ ಅಭ್ಯರ್ಥಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ತೇಜ್ ಪ್ರತಾಪ್ ಯಾದವ್ ಸೇರಿದಂತೆ ಪ್ರಮುಖ ನಾಯಕರ ಭವಿಷ್ಯ ಇಂದು ಮತಯಂತ್ರ ಸೇರಲಿದೆ.

ಬಿಹಾರ ರಾಜ್ಯಪಾಲ ಫಗು ಚೌಹಾಣ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಸೇರಿದಂತೆ ಅನೇಕ ಪ್ರಮುಖರು ಬೆಳಿಗ್ಗೆಯೇ ಮತ ಚಲಾಯಿಸಿದ್ದಾರೆ.

ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಬೇಕು. ಮಾಸ್ಕ್ ಧರಿಸಿಕೊಂಡು ಹಾಗೂ ಅಂತರ ಕಾಯ್ದುಕೊಳ್ಳುವ ಮೂಲಕ ಜಾಗರೂಕತೆಯಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮತ ಚಲಾಯಿಸಿದ ಬಳಿಕ ಸುಶೀಲ್ ಕುಮಾರ್ ಮೋದಿ ಮನವಿ ಮಾಡಿದ್ದಾರೆ.

ADVERTISEMENT

17 ಜಿಲ್ಲೆಗಳ ವ್ಯಾಪ್ತಿಗೆ ಬರುವ, 94 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದ್ದು. 2.85 ಕೋಟಿ ಮತದಾರರಿದ್ದಾರೆ. 1,463 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಮೂರು ಹಂತಗಳ ಚುನಾವಣೆಗಳಲ್ಲಿ, ಈ ಹಂತವು ಅತ್ಯಂತ ಮಹತ್ವ ಪಡೆದಿದೆ ಎನ್ನಲಾಗಿದೆ.

ಮತದಾನಕ್ಕೆ ಒಳಗಾಗಲಿರುವ ಒಟ್ಟು 94 ಕ್ಷೇತ್ರಗಳಲ್ಲಿ 56 ಕಡೆ ಆರ್‌ಜೆಡಿ ಹಾಗೂ 24 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳಿದ್ದಾರೆ. ಇತ್ತೀಚೆಗೆ ಘಟಬಂಧನವನ್ನು ಸೇರಿಕೊಂಡಿರುವ ಸಿಪಿಐ ಹಾಗೂ ಸಿಪಿಎಂ ತಲಾ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿವೆ. ಉಳಿದ ಕ್ಷೇತ್ರಗಳನ್ನು ಘಟಬಂಧನದ ಇತರ ಪಕ್ಷಗಳಿಗೆ ನೀಡಲಾಗಿದೆ.

ಎನ್‌ಡಿಎ ಕೂಟದಿಂದ 46 ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ 43 ಕ್ಷೇತ್ರಗಳಲ್ಲಿ ಜೆಡಿಯು ಅಭ್ಯರ್ಥಿಗಳಿದ್ದಾರೆ. ಉಳಿದ ಐದು ಕ್ಷೇತ್ರದಲ್ಲಿ ವಿಐಪಿಯ ಅಭ್ಯರ್ಥಿಗಳಿದ್ದಾರೆ. ಎರಡೂ ಬಣಗಳಿಂದ ಹೊರಗೆ ಉಳಿದಿರುವ ಎಲ್‌ಜೆಪಿಯು 52 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.