ಪಟ್ನಾ: ಬಿಹಾರದ ಎಲ್ಲ 243 ವಿಧಾನಸಭಾ ಕ್ಷೇತ್ರಗಳಲ್ಲೂ ಗೋ ರಕ್ಷಕರನ್ನು ಕಣಕ್ಕಿಳಿಸುವುದಾಗಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಸೋಮವಾರ ಘೋಷಿಸಿದ್ದಾರೆ.
ಉತ್ತರಾಖಂಡ ಜ್ಯೋತಿರ್ ಮಠದ ಶಂಕರಾಚಾರ್ಯ ಆಗಿರುವ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು, ಮತದಾರರಿಗೆ 'ಗೋ ಹತ್ಯೆಯ ಪಾಪದಲ್ಲಿ ಭಾಗಿಯಾಗದಂತೆ' ಜಾಗೃತಿ ಮೂಡಿಸುವ ಸಲುವಾಗಿ ಬಿಹಾರದಾದ್ಯಂತ ಸೆಪ್ಟೆಂಬರ್ 13ರಂದು 'ಗೋ ಮಾತಾ ಸಂಕಲ್ಪ ಯಾತ್ರೆ' ಆರಂಭಿಸಿದ್ದರು. ಅದು ಮುಕ್ತಾಯಗೊಳ್ಳುತ್ತಿದ್ದಂತೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಘೋಷಣೆ ಮಾಡಿದ್ದಾರೆ.
'ಯಾತ್ರೆಯ ಸಂದರ್ಭದಲ್ಲಿ ಬಿಹಾರವನ್ನು ಅತ್ಯಂತ ಹತ್ತಿರದಿಂದ ನೋಡಿದ್ದೇನೆ. ಗೋ ರಕ್ಷಣೆಯು ನಾನು ಭಾವಿಸಿದ್ದಕ್ಕಿಂತಲೂ ಆಳವಾಗಿ ಇಲ್ಲಿನ ಸಂಸ್ಕೃತಿಯಲ್ಲಿ ಬೇರೂರಿದೆ. ಎಲ್ಲ 38 ಜಿಲ್ಲೆಗಳಲ್ಲಿ ಜನರು ಗೋ ರಕ್ಷಣೆಯನ್ನು ಬೆಂಬಲಿಸಿದ್ದಾರೆ' ಎಂದು ಹೇಳಿದ್ದಾರೆ.
ಪ್ರಮುಖ ರಾಜಕೀಯ ಪಕ್ಷಗಳು ಗೋ ರಕ್ಷಣೆ ವಿಚಾರವನ್ನು ನಿರ್ಲಕ್ಷಿಸುತ್ತಿರುವ ಕಾರಣ, ಬಲವಂತವಾಗಿ ಅಭ್ಯರ್ಥಿಗಳನ್ನು ಚುನಾವಣೆಗೆ ಇಳಿಸಬೇಕಾಗಿದೆ ಎಂದೂ ತಿಳಿಸಿದ್ದಾರೆ.
ತಮ್ಮ ಅಭ್ಯರ್ಥಿಗಳು ಈಗಾಗಲೇ ನಾಮಪತ್ರ ಸಲ್ಲಿಕೆ ಆರಂಭಿಸಿದ್ದಾರೆ ಎಂದಿರುವ ಅವರು, ಅಡೆತಡೆಗಳು ಎದುರಾಗುವ ಸಾಧ್ಯತೆ ಇರುವುದರಿಂದ ನಾಮಪತ್ರ ಸಲ್ಲಿಕೆ ಮುಕ್ತಾಯದ ಬಳಿಕವಷ್ಟೇ ಎಲ್ಲರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ವಿವರಿಸಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳು ಸ್ವತಂತ್ರವಾಗಿ ಕಣಕ್ಕಿಳಿಯಲಿದ್ದಾರೆ. ಹಲವೆಡೆ, ಅಖಿಲ ಭಾರತೀಯ ಜನ ಸಂಘ, ರಾಷ್ಟ್ರೀಯ ಸನಾತನ ಪಾರ್ಟಿ, ರಾಷ್ಟ್ರೀಯ ಸ್ವಾಭಿಮಾನ್ ಪಾರ್ಟಿ, ಸರ್ವೋದಯ ಪಾರ್ಟಿಯನ್ನು ಬೆಂಬಲಿಸುವುದಾಗಿ ಮಾಹಿತಿ ನೀಡಿದ್ದಾರೆ.
'ನಾನು ರಾಜಕೀಯದಲ್ಲಿ ತೊಡಗುವುದಿಲ್ಲ. ಧರ್ಮ ರಕ್ಷಣೆ ಉದ್ದೇಶದಿಂದ ಜವಬ್ದಾರಿಯನ್ನು ಪೂರೈಸುತ್ತಿದ್ದೇನೆ' ಎಂದು ಸ್ಪಷ್ಟಪಡಿಸಿರುವ ಅವರು, 'ಗೋ ಹತ್ಯೆ ಮಾಡಲು, ಗೋ ಮಾಂಸ ಸೇವಿಸಲು ಅವಕಾಶ ಕಲ್ಪಿಸುವವರು ಪಾಪಿಗಳು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.