ನಕ್ಸಲ್ ಪೀಡಿತ ಭೀಮಬಂದ್‌ನಲ್ಲಿ 20 ವರ್ಷಗಳ ಬಳಿಕ ಮತದಾನ
ಭೀಮಬಂಧ್: ಬಿಹಾರದ 243 ಸದಸ್ಯ ಬಲದ ವಿಧಾನಸಭೆಗೆ 121 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯುತ್ತಿದೆ. ನಕ್ಸಲ್ ಪೀಡಿತ ಪ್ರದೇಶವಾಗಿದ್ದ ಭೀಮಬಂದ್ ಪ್ರದೇಶದಲ್ಲಿ 20 ವರ್ಷಗಳ ಬಳಿಕ ಮತದಾನ ನಡೆಯುತ್ತಿದೆ.
ಎರಡು ದಶಕಗಳ ಬಳಿಕ ಸ್ವಂತ ಗ್ರಾಮದಲ್ಲಿ ಮತಚಲಾವಣೆ ಮಾಡಿದ್ದಕ್ಕೆ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಭೀಮಬಂದ್‌ನಲ್ಲಿ ಕೊನೆಯ ಬಾರಿ 2005ರಲ್ಲಿ ಮತದಾನ ನಡೆದಿತ್ತು. ಈ ವೇಳೆ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಏಳು ಪೊಲೀಸ್ ಅಧಿಕಾರಿಗಳ ಹತ್ಯೆಯಾಗಿತ್ತು. ಆ ಬಳಿಕ ನಕ್ಸಲರ ಚಟುವಟಿಕೆ ಹೆಚ್ಚಾದ ಕಾರಣ ಭಯದಿಂದ ಗ್ರಾಮದಲ್ಲಿ ಮತದಾನವನ್ನು ಸ್ಥಗಿತಗೊಳಿಸಿ 20 ಕಿ.ಮಿ ದೂರದಲ್ಲಿ ಮತಗಟ್ಟೆಯನ್ನು ಸ್ಥಾಪಿಸಲಾಗುತ್ತಿತ್ತು ಎಂದು ಸ್ಥಳೀಯರೊಬ್ಬರು ಹಳೆಯ ಘಟನೆಯನ್ನು ನೆನಪಿಸಿದ್ದಾರೆ.
‘ಈ ಬಾರಿ ಗ್ರಾಮದಲ್ಲೇ ಮತ ಚಲಾವಣೆ ಮಾಡಿದ್ದು ಖುಷಿ ನೀಡಿದೆ. ಶಾಂತಿಯುತ ಚುನಾವಣೆ ನಡೆಸಿದ್ದಕ್ಕಾಗಿ ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇವೆ’ ಎಂದು ಗ್ರಾಮಸ್ಥರು ಹೇಳಿದ್ದಾರೆ.
‘ಈ ಹಿಂದೆ ಮತದಾನ ಮಾಡಲು ದಟ್ಟ ಅರಣ್ಯವನ್ನು ದಾಟಿ ತೆರಳಬೇಕಿತ್ತು. ಆದರೆ ಈಗ ಗ್ರಾಮದಲ್ಲೇ ಮತಗಟ್ಟೆ ತೆರದಿರುವುದು ಮತದಾನ ಮಾಡಲು ನೆರವಾಗಿದೆ. ಈ ಪ್ರದೇಶದಲ್ಲಿ ಈಗ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ’ ಎಂದು ನೀಲಮ್ ಕುಮಾರಿ ಎನ್ನುವವರು ಹೇಳಿದ್ದಾರೆ.
‘ಗ್ರಾಮದ ಬಳಿ ಭದ್ರತಾ ಅಧಿಕಾರಿಗಳು ಶಿಬಿರ ನಿರ್ಮಿಸಿದ ಬಳಿಕ ನಾವು ಶಾಂತಿಯುತವಾಗಿ, ಯಾವುದೇ ಭಯವಿಲ್ಲದೆ ಬದುಕುತ್ತಿದ್ದೇವೆ. ಮತಗಟ್ಟೆಯನ್ನೂ ಇಲ್ಲೇ ಸ್ಥಾಪಿಸಿದ್ದಕ್ಕೆ ಯುವಕರು ಮಾತ್ರವಲ್ಲದೆ ವೃದ್ಧರೂ ಸುಲಭವಾಗಿ ಮತದಾನ ಮಾಡಬಹುದು’ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.