ADVERTISEMENT

ಮದ್ಯ ನಿಷೇಧ ನಿರ್ಧಾರ ಹಿಂಪಡೆಯುವುದಿಲ್ಲ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 16:04 IST
Last Updated 26 ನವೆಂಬರ್ 2021, 16:04 IST
ನಿತೀಶ್ ಕುಮಾರ್
ನಿತೀಶ್ ಕುಮಾರ್    

ಪಟ್ನಾ: ರಾಜ್ಯದಲ್ಲಿ ಮದ್ಯ ನಿಷೇಧ ಮುಂದುವರಿಯಲಿದ್ದು, ನಿರ್ಧಾರ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಶುಕ್ರವಾರ ಪುನರುಚ್ಚರಿಸಿದ್ದಾರೆ.

ಇಲ್ಲಿನ ಜ್ಞಾನ ಭವನದಲ್ಲಿ ನಡೆದ 'ನಶೆ ಮುಕ್ತ ದಿನ' ಕಾರ್ಯಕ್ರಮದಲ್ಲಿ ಮಾತನಾಡಿದ ನಿತೀಶ್, 'ಮಹಿಳೆಯರ ಒತ್ತಾಯದಂತೆ ಬಿಹಾರದಲ್ಲಿ 2016ರಲ್ಲಿ ಮದ್ಯನಿಷೇಧ ಕಾನೂನು ಜಾರಿಗೊಳಿಸಲಾಗಿದೆ. ಪ್ರಾರಂಭಿಕವಾಗಿ ಗ್ರಾಮೀಣ ಪ್ರದೇಶದಲ್ಲಿ ಮಾತ್ರವೇ ನಿಷೇಧ ಹೇರಿದ್ದೆವು. ಆದರೆ, ನಗರ ಪ್ರದೇಶದ ಮಹಿಳೆಯರೂ ಇದೇ ಬೇಡಿಕೆ ಇಟ್ಟ ಕಾರಣ ಸಂಪೂರ್ಣ ನಿಷೇಧ ಹೇರಿದೆವು' ಎಂದು ಹೇಳಿದ್ದಾರೆ.

ಸರ್ವಪಕ್ಷ ಸಭೆ ಬಳಿಕವೇ ಈ ನಿರ್ಧಾರ ಕೈಗೊಳ್ಳಲಾಯಿತು ಎಂಬುದನ್ನು ಒತ್ತಿ ಹೇಳಿದ ನಿತೀಶ್, ನಿರ್ಧಾರದತ್ತ ಬೊಟ್ಟು ಮಾಡುತ್ತಿರುವವರೂ ಸಭೆಯಲ್ಲಿದ್ದರು ಎಂಬುದನ್ನು ಮರೆಯಬಾರದು ಎಂದು ಕುಟುಕಿದ್ದಾರೆ.

ADVERTISEMENT

ಇದೇ ಸಂದರ್ಭದಲ್ಲಿಸರ್ಕಾರಿ ಹಾಗೂ ಖಾಸಗಿ ವಲಯದ3.5 ಲಕ್ಷ ನೌಕರರು ತಮ್ಮ ಜೀವನದಲ್ಲಿ ಇನ್ನುಮುಂದೆ ಮದ್ಯಪಾನ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದರು.

ಮದುವೆಗಳ ಸಂದರ್ಭದಲ್ಲಿಕಲ್ಯಾಣ ಮಂಟಪಗಳಲ್ಲಿನ ವದುವಿನ ಕೊಠಡಿ ಸೇರಿದಂತೆಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ದಾಸ್ತಾನು ಮತ್ತು ಸಾಗಣೆ ಬಗ್ಗೆ ತಪಾಸಣೆ ನಡೆಸುವ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ, 'ರಾಜ್ಯದಲ್ಲಿ ಮದ್ಯ ಬಳಕೆ ಸಾಧ್ಯವಿರುವ ಯಾವುದೇ ಸ್ಥಳದಲ್ಲಿಯೂ ಪೊಲೀಸರು ತಪಾಸಣೆ ನಡೆಸಲಿದ್ದಾರೆ' ಎಂದಿದ್ದಾರೆ.

'ನಾನು ಶಾಲೆಗೆ ಹೋಗುತ್ತಿದ್ದಾಗ, ಕುಡುಕರ ಬಗ್ಗೆ ಅಸಹನೆಯಿತ್ತು. ನನ್ನ ಜೀವಿತಾವಧಿಯಲ್ಲಿ ಯಾವಾಗಲಾದರೂ ಮದ್ಯ ನಿಷೇಧಿಸುವ ಅವಕಾಶ ಸಿಕ್ಕರೆ ಅದನ್ನು ಮಾಡಲೇಬೇಕೆಂದು ಆಗಲೇ ನಿರ್ಧರಿಸಿದ್ದೆ.ಕೊನೆಗೂ ಮಾಡಿದೆ.ಕುಡಿತದಿಂದ ಪ್ರಾಣ ಹಾನಿಯಾಗುತ್ತದೆ. ಜನರು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಮುಂದುವರಿದು,'ಮದ್ಯವು ಹೇಗೆ ಪ್ರಾಣ ತೆಗೆಯುತ್ತದೆ ಎಂಬುದನ್ನು ಬಿಹಾರದಲ್ಲಿ ಕಾಣಬಹುದಾಗಿತ್ತು. ಮದ್ಯದಂತಹ ಕೆಟ್ಟ ಪಾನಿಯಾಗಳನ್ನು ಸೇವಿಸುವವರು ನಿಧನ ಹೊಂದುತ್ತಾರೆ. ರಸ್ತೆ ಅಪಘಾತಕ್ಕೊಳಗಾಗುವ ಶೇ27 ರಷ್ಟು ಜನರ ಸಾವಿಗೆ ಮದ್ಯ ಸೇವನೆಯೇ ಕಾರಣ. ಶೇ 18 ರಷ್ಟು ಜನರು ಗಲಾಟೆ ಮಾಡಿಕೊಳ್ಳುವುದಕ್ಕೆ ಮದ್ಯಪಾನ ಕಾರಣ. ವಿಶ್ವದಾದ್ಯಂತ ಶೇ 17 ರಷ್ಟು ಜನರು ಮದ್ಯ ಸೇವಿಸಿದ್ದಾಗಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ' ಎಂದು ಅಂಕಿ–ಅಂಶ ಸಹಿತ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.