ADVERTISEMENT

ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರಿಸುವೆ: ಬಿಹಾರ ಡಿಸಿಎಂ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 15:19 IST
Last Updated 11 ಆಗಸ್ಟ್ 2025, 15:19 IST
ಮನೋಜ್‌ಕುಮಾರ್‌ ಸಿನ್ಹಾ
ಮನೋಜ್‌ಕುಮಾರ್‌ ಸಿನ್ಹಾ   

ಪಟ್ನಾ: ‘ರಾಹುಲ್‌ ಗಾಂಧಿ ಹಾಗೂ ತೇಜಸ್ವಿ ಯಾದವ್‌ ಅವರಂತೆ ನಾನಲ್ಲ; ಚುನಾವಣಾ ಆಯೋಗದ ನೋಟಿಸ್‌ಗೆ ಉತ್ತರಿಸುವೆ’ ಎಂದು ಬಿಹಾರ ಉಪಮುಖ್ಯಮಂತ್ರಿ ವಿಜಯ್‌ಕುಮಾರ್‌ ಸಿನ್ಹಾ ಅವರು ಸೋಮವಾರ ಇಲ್ಲಿ ತಿಳಿಸಿದರು.

ತಾವು ಮತದಾರರ ಎರಡು ಗುರುತಿನ ಚೀಟಿ ಹೊಂದಿರುವುದಕ್ಕೆ ಆಯೋಗವು ನೀಡಿರುವ ನೋಟಿಸ್‌ಗೆ ಸಂಬಂಧಿಸಿದಂತೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿನ್ಹಾ, ‘ಸಂವಿಧಾನ ಮತ್ತು ಸಾಂವಿಧಾನಿಕ ಸಂಸ್ಥೆಗಳನ್ನು ನಾನು ಗೌರವಿಸುತ್ತೇನೆ’ ಎಂದು ಹೇಳಿದರು.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ನಡೆಸಿದ ಆಯೋಗವು ಕರಡು ಪಟ್ಟಿಯನ್ನು ಪ್ರಕಟಿಸಿದ್ದು, ಪರಿಷ್ಕರಣೆಯ ನಂತರವೂ ಉಪಮುಖ್ಯಮಂತ್ರಿ ವಿಜಯ್‌ಕುಮಾರ್‌ ಸಿನ್ಹಾ ಅವರು ಎರಡು ವಿಧಾನಸಭಾ ಕ್ಷೇತ್ರಗಳ ಮತದಾರರಾಗಿದ್ದಾರೆ ಎಂದು ರಾಷ್ಟ್ರೀಯ ಜನತಾದಳದ (ಆರ್‌ಜೆಡಿ) ತೇಜಸ್ವಿ ಯಾದವ್‌ ದೂರಿದ್ದರು.

ADVERTISEMENT

ಇದು ವಿವಾದಕ್ಕೆ ಎಡೆಮಾಡಿಕೊಡುತ್ತಿದ್ದಂತೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದ ಉಪಮುಖ್ಯಮಂತ್ರಿ, ‘ನನ್ನ ಬಳಿ ಸೂಕ್ತ ದಾಖಲೆಗಳಿವೆ’ ಎಂದೂ ಹೇಳಿಕೊಂಡಿದ್ದರು.

ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಚುನಾವಣಾ ಆಯೋಗವು, ಆ.14ರೊಳಗೆ ಉತ್ತರಿಸುವಂತೆ ಉಪಮುಖ್ಯಮಂತ್ರಿಗೆ ನೋಟಿಸ್‌ ನೀಡಿತ್ತು.

‘ಸಿನ್ಹಾ ಅವರು ಮತದಾರರ ಎರಡು ಗುರುತಿನ ಚೀಟಿ ಹೊಂದಿದ್ದಾರೆ. ಅದರಲ್ಲಿ ಒಂದನ್ನು ಅಧಿಕೃತವಾಗಿ ನೀಡಿಲ್ಲ’ ಎಂದಿರುವ ಆಯೋಗದ ಅಧಿಕಾರಿಗಳು, ತೇಜಸ್ವಿ ಯಾದವ್‌ಗೂ ನೋಟಿಸ್‌ ಜಾರಿ ಮಾಡಲಾಗಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.