ಬಿಜೆಪಿ ಧ್ವಜ
ಬೆಂಗಳೂರು: ಬಿಹಾರ ವಿಧಾನಸಭಾ ಚುನಾವಣೆಗೆ 71 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿದೆ.
ಬಿಹಾರ ವಿಧಾನಸಭಾಧ್ಯಕ್ಷ ನಂದ ಕಿಶೋರ್ ಯಾದವ್, ಸಂಸ್ಕೃತಿ ಸಚಿವ ಮೋತಿಲಾಲ್ ಪ್ರಸಾದ್ ಸೇರಿದಂತೆ 16 ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಯಾದವ್ ಬದಲಿಗೆ ಪಾಟ್ನಾ ಸಾಹಿಬ್ ಕ್ಷೇತ್ರದ ಅಭ್ಯರ್ಥಿಯನ್ನಾಗಿ ರತ್ನೇಶ್ ಕುಶ್ವಾಹ ಅವರಿಗೆ ಟಿಕೆಟ್ ನೀಡಲಾಗಿದೆ. ಯಾದವ್ ಅವರು ಈ ಕ್ಷೇತ್ರದಲ್ಲಿ ಏಳು ಬಾರಿ ಜಯ ಗಳಿಸಿದ್ದಾರೆ.
ಉಪಮುಖ್ಯಮಂತ್ರಿಗಳಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಕುಮಾರ್ ಸಿನ್ಹಾ ಅವರನ್ನು ಕ್ರಮವಾಗಿ ತಾರಾಪುರ ಮತ್ತು ಲಖಿಸರಾಯ್ ಕ್ಷೇತ್ರಗಳಿಂದ ಕಣಕ್ಕಿಳಿಸಲಾಗಿದೆ. ಸಾಮ್ರಾಟ್ ಪ್ರಸ್ತುತ ಎಂಎಲ್‌ಸಿ ಆಗಿದ್ದು, ಅವರ ವಯಸ್ಸಿನ ಪ್ರಮಾಣಪತ್ರದ ವಿವಾದದಲ್ಲಿ ಸಿಲುಕಿದ್ದಾರೆ. ಚೌಧರಿ ಅವರು ಆರ್‌ಜೆಡಿ ಅಭ್ಯರ್ಥಿಯಾಗಿ ಪರ್ಬಟ್ಟಾ ಕ್ಷೇತ್ರದಲ್ಲಿ 2010ರಲ್ಲಿ ಗೆಲುವು ಸಾಧಿಸಿದ್ದರು.
ವಿಜಯ್ ಕುಮಾರ್ ಸಿನ್ಹಾ ಅವರು ಪಟ್ನಾ ಹಾಗೂ ಲಿಖಿಸರಾಯ್ ಕ್ಷೇತ್ರದ ಮತದಾರರಾಗಿರುವುದು ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆಯ ಸಂದರ್ಭದಲ್ಲಿ ಬಯಲಿಗೆ ಬಂದಿತ್ತು. ಮಾಜಿ ಉಪಮುಖ್ಯಮಂತ್ರಿ ತಾರ್‌ಕಿಶೋರ್ ಪ್ರಸಾದ್ ಕತಿಹಾರ್‌ನಿಂದ ಸ್ಪರ್ಧಿಸಲಿದ್ದಾರೆ.
ಪಕ್ಷದ ಅನುಭವಿ ಸುಶೀಲ್ ಕುಮಾರ್ ಮೋದಿ ಬದಲಿಗೆ 2020ರ ನವೆಂಬರ್‌ನಲ್ಲಿ ನಿತೀಶ್ ಸಂಪುಟದಲ್ಲಿ ಉಪಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದ ಮಾಜಿ ಉಪಮುಖ್ಯಮಂತ್ರಿಗಳಾದ ತಾರಕಿಶೋರ್ ಪ್ರಸಾದ್ ಮತ್ತು ರೇಣು ದೇವಿ ಅವರಿಗೆ ಕ್ರಮವಾಗಿ ಕತಿಹಾರ್ ಮತ್ತು ಬೆಟ್ಟಯ್ಯದಿಂದ ಟಿಕೆಟ್ ನೀಡಲಾಗಿದೆ.
ರೇಣು ದೇವಿ ಸೇರಿದಂತೆ ಒಂಬತ್ತು ಮಹಿಳಾ ಅಭ್ಯರ್ಥಿಗಳು ಪಟ್ಟಿಯಲ್ಲಿದ್ದಾರೆ. ಶಾಸಕಿ ಶ್ರೇಯಸಿ ಸಿಂಗ್ ಜಮುಯಿ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ.
ವಿಧಾನ ಪರಿಷತ್ ಸದಸ್ಯರೂ ಆಗಿರುವ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರು ಸಿವಾನ್‌ನಿಂದ ಸ್ಪರ್ಧಿಸುತ್ತಿದ್ದರೆ, 2024ರ ಲೋಕಸಭಾ ಚುನಾವಣೆಯಲ್ಲಿ ಆರ್‌ಜೆಡಿಯ ಮೀಸಾ ಭಾರ್ತಿ (ಲಾಲೂ ಪ್ರಸಾದ್ ಯಾದವ್ ಪುತ್ರಿ) ವಿರುದ್ಧ ಸೋತಿದ್ದ ರಾಮ್ ಕೃಪಾಲ್ ಯಾದವ್ ಅವರನ್ನು ದಾನಾಪುರ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ. ಯಾದವ್ ಅವರು ಕೇಂದ್ರದ ಮಾಜಿ ಸಚಿವ. 2014ರಲ್ಲಿ ಬಿಜೆಪಿಗೆ ಸೇರಿದ್ದ ಅವರು ಮೀಸಾ ಭಾರ್ತಿ ಅವರನ್ನು ಎರಡು ಸಲ ಸೋಲಿಸಿದ್ದರು.
ಆದಾಗ್ಯೂ, ಭೋಜ್‌ಪುರಿ ನಟ ಪವನ್ ಸಿಂಗ್ ಮತ್ತು ಗಾಯಕಿ ಮೈಥಿಲಿ ಠಾಕೂರ್ ಅವರಿಗೆ ಪಕ್ಷ ಟಿಕೆಟ್ ನಿರಾಕರಿಸಿದೆ. ಪಕ್ಷಾಂತರಿಗಳಿಗೂ ಮಣೆ ಹಾಕಲಾಗಿದೆ.
ಎನ್‌ಡಿಎ ಮೈತ್ರಿಕೂಟದಲ್ಲಿ ಬಿಜೆಪಿ ಹಾಗೂ ಜೆಡಿಯು ತಲಾ 101 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿವೆ. ಉಳಿದ ಕ್ಷೇತ್ರಗಳನ್ನು ಮೈತ್ರಿಕೂಟದ ಇತರ ಪಕ್ಷಗಳಿಗೆ ಬಿಟ್ಟುಕೊಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಭಾನುವಾರ ಸಂಜೆ ಸಭೆ ಸೇರಿ ಅಭ್ಯರ್ಥಿಗಳ ಹೆಸರನ್ನು ಆಖೈರುಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.