ನವದೆಹಲಿ: ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಳ್ಳುವ ಮುನ್ನ ಎನ್‌ಡಿಎ ಮೈತ್ರಿಕೂಟವು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಮಾತುಕತೆಯಲ್ಲಿ ತೊಡಗಿದೆ.
ಲೋಕಜನಶಕ್ತಿಯ ನಾಯಕ ಚಿರಾಗ್ ಪಾಸ್ವಾನ್ ಅವರು ಮಂಗಳವಾರ ಬಿಹಾರದ ಬಿಜೆಪಿ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಅವರನ್ನು ಭೇಟಿಯಾಗಿ ಸೀಟು ಹಂಚಿಕೆ ವಿಚಾರವಾಗಿ ಮಾತುಕತೆ ನಡೆಸಿದರು.
ಎನ್‌ಡಿಎ ಮೈತ್ರಿಕೂಟದ ಅಡಿಯಲ್ಲಿ ಸ್ಪರ್ಧಿಸಲು ಚಿರಾಗ್ ಸಿದ್ಧರಾಗಿದ್ದಾರೆ. 235 ವಿಧಾನಸಭಾ ಕ್ಷೇತ್ರಗಳ ಪೈಕಿ 40 ಕ್ಷೇತ್ರ ಬಿಟ್ಟುಕೊಡುವಂತೆ ಚಿರಾಗ್ ಪಟ್ಟು ಹಿಡಿದಿದ್ದು, ಬಿಜೆಪಿ ಕೇವಲ 15 ಕ್ಷೇತ್ರಗಳನ್ನು ಬಿಟ್ಟುಕೊಡಲು ಸಮ್ಮತಿಸಿದೆ. ಬಿಜೆಪಿ ಹಾಗೂ ಜೆಡಿಯು ತಲಾ 100 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಮುಂದಾಗಿದೆ. ಉಳಿದ 35 ಸ್ಥಾನಗಳಲ್ಲಿ ಎಲ್‌ಜೆಪಿ ಜೊತೆಗೆ ವಿಕಾಸ್‌ಶೀಲ್ ಇನ್ಸಾನ್ ಪಕ್ಷ (ವಿಐಪಿ), ಹಿಂದೂಸ್ತಾನ್ ಅವಾಮಿ ಪಕ್ಷ, ರಾಷ್ಟ್ರೀಯ ಲೋಕ ಸಮತಾ ಪಕ್ಷ ಕಣಕ್ಕಿಳಿಸಲು ಚಿಂತನೆ ನಡೆಸಿದೆ. ಮೈತ್ರಿಪಕ್ಷಗಳಿಗೆ ಕಡಿಮೆ ಕ್ಷೇತ್ರ ಬಿಟ್ಟುಕೊಟ್ಟರೆ, ಎನ್‌ಡಿಎ ಒಕ್ಕೂಟಕ್ಕೆ ಅರ್ಥವಿಲ್ಲ ಎಂದು ಚಿರಾಗ್ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಧರ್ಮೇಂದ್ರ ಪ್ರಧಾನ್ ನಿರ್ಧಾರದ ಕುರಿತು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮುಂದೆ ಚಿರಾಗ್ ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2020ರ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಜೆಪಿಯು 143 ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ, ಒಂದು ಕ್ಷೇತ್ರದಲ್ಲಿ ಗೆಲುವು ಪಡೆದಿತ್ತು. ಆದರೆ, ಹಲವು ಕ್ಷೇತ್ರಗಳಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಚಿರಾಗ್ ಅವರು ಎಲ್‌ಜೆಪಿ ಪಕ್ಷವನ್ನು ವಿಭಜಿಸಿ, ಎಲ್‌ಜೆಪಿ(ರಾಮ್ ವಿಲಾಸ್) ಪಕ್ಷವನ್ನು ಸ್ಥಾಪಿಸಿದ್ದರು. ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಗೆಲುವು ಪಡೆದಿದ್ದರು. ಲೋಕಸಭಾ ಚುನಾವಣೆಯಲ್ಲಿ ಗೆಲುವು ಪಡೆದ ಕ್ಷೇತ್ರಗಳಲ್ಲಿ ತಲಾ 2 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು ಎಂದು ಚಿರಾಗ್ ಬೇಡಿಕೆ ಇಟ್ಟಿದ್ದಾರೆ.
ಹೀಗಾಗಿ ಈ ವಾರಾಂತ್ಯದಲ್ಲಿ ಬಿಜೆಪಿ ಸೀಟು ಹಂಚಿಕೆ ಕುರಿತು ಮಾತುಕತೆ ನಡೆಸಲಿದೆ. ಜಿತನ್‌ರಾಮ್ ಮಾಂಜಿ ನೇತೃತ್ವದ ಹಿಂದೂಸ್ತಾನ್ ಅವಾಮಿ ಮೋರ್ಚಾ, ಉಪೇಂದ್ರ ಕುಶ್ವಾಹಾ ನೇತೃತ್ವದ ಆರ್‌ಎಲ್‌ಎಸ್‌ಪಿ ತಲಾ 15ರಿಂದ 20 ಕ್ಷೇತ್ರಗಳಿಗೆ ಪಟ್ಟು ಹಿಡಿದಿವೆ. ಆದರೆ, ಬಿಜೆಪಿ ಮಾತ್ರ ಎರಡು 10ಕ್ಕಿಂತಲೂ ಕಡಿಮೆ ಸೀಟು ನೀಡಲು ನಿರ್ಧರಿಸಿದೆ. ಚಿರಾಗ್ ಅವರಿಗೆ ಎಚ್‌ಎಎಂ ಹಾಗೂ ಆರ್‌ಎಲ್‌ಎಸ್‌ಪಿಗಿಂತ ಹೆಚ್ಚಿನ ಸೀಟು ಬಿಟ್ಟು ಕೊಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಒಂದೊಮ್ಮೆ ಮಾತುಕತೆ ಯಶಸ್ವಿಯಾಗದಿದ್ದರೆ, ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ಜೊತೆಗೂ ಕೈ ಜೋಡಿಸಲು ಹಿಂಜರಿಯುವುದಿಲ್ಲ ಎಂದು ಚಿರಾಗ್ ಸುಳಿವು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.