ಪಟ್ನಾ: ಈ ವರ್ಷಾಂತ್ಯದಲ್ಲಿ ಬಿಹಾರ ವಿಧಾನಸಭೆಗೆ ನಡೆಯುವ ಚುನಾವಣೆ ವೇಳೆ ಮತಗಳನ್ನು ಕದಿಯುವ ಸಲುವಾಗಿ ಚುನಾವಣಾ ಆಯೋಗವು ಬಿಜೆಪಿ ಜೊತೆ ಕೈ ಜೋಡಿಸುತ್ತಿದೆ ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಬುಧವಾರ ಆರೋಪಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಬಿಜೆಪಿ ನಾಯಕರು ಎರಡೆರಡು ಮತದಾರರ ಗುರುತಿನ ಚೀಟಿಗಳನ್ನು ಇಟ್ಟುಕೊಳ್ಳುವುದಕ್ಕೂ ಚುನಾವಣಾ ಆಯೋಗ ಸಹಾಯ ಮಾಡುತ್ತಿದೆ' ಎಂದು ದೂರಿದ್ದಾರೆ.
'ಮತಗಳನ್ನು ಕದಿಯುವ ಸಲುವಾಗಿ ಚುನಾವಣಾ ಆಯೋಗವು ಬಿಜೆಪಿಯೊಂದಿಗೆ ಕೈ ಜೋಡಿಸುತ್ತಿದೆ ಎಂಬುದು ಸತ್ಯ. ಆಯೋಗವು ಮೊದಲ ಹಂತದ 'ವಿಶೇಷ ಸಮಗ್ರ ಪರಿಷ್ಕರಣೆ' (ಎಸ್‌ಐಆರ್) ಬಳಿಕ ಪ್ರಕಟಿಸಿರುವ ಮತದಾರರ ಕರಡು ಪಟ್ಟಿಯನ್ನು ಮತಗಳ ದರೋಡೆ ಎಂದು ಕರೆಯಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಜಾಫರ್‌ಪುರ ಮೇಯರ್ ನಿರ್ಮಲಾ ದೇವಿ ಅವರ ಬಳಿ ಎರಡು ವೋಟರ್ ಐಡಿ ಇವೆ ಎಂದಿರುವ ತೇಜಸ್ವಿ, 'ವಿಧಾನಸಭಾ ಚುನಾವಣೆಗೆ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿರುವ ನಿರ್ಮಲಾ ದೇವಿ ಅವರು, ಎಸ್‌ಐಆರ್ ಕರಡು ಪಟ್ಟಿಯ ಪ್ರಕಾರ ಒಂದೇ ವಿಧಾನಸಭಾ ಕ್ಷೇತ್ರದ ಎರಡು ಮತದಾರರ ಗುರುತಿನ ಚೀಟಿಗಳನ್ನು ಹೊಂದಿದ್ದಾರೆ. ಅಚ್ಚರಿಯ ವಿಚಾರವೆಂದರೆ, ಅವರ ಕುಟುಂಬದ ಇನ್ನಿಬ್ಬರೂ ಬೇರೆ ಬೇರೆ ಮತಗಟ್ಟೆಗಳ ಎರಡೆರಡು ಗುರುತಿನ ಚೀಟಿಗಳನ್ನು ಇಟ್ಟುಕೊಂಡಿದ್ದಾರೆ' ಎಂದು ಆರೋಪ ಮಾಡಿದ್ದಾರೆ.
ಹಾಗೆಯೇ, 'ಈ ರೀತಿ ಅಕ್ರಮ ಹೇಗಾಯಿತು? ಇದಕ್ಕೆ ಹೊಣೆ ಯಾರು? ಎಂದೂ ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.