ADVERTISEMENT

ಬಿಹಾರ ಚುನಾವಣೆ | ಸೋಲುವ ಕ್ಷೇತ್ರಗಳ ಕಸದ ತೊಟ್ಟಿಯಾಗಲು ಸಿದ್ಧವಿಲ್ಲ: ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
ಪಿಟಿಐ
Published 10 ಸೆಪ್ಟೆಂಬರ್ 2025, 15:34 IST
Last Updated 10 ಸೆಪ್ಟೆಂಬರ್ 2025, 15:34 IST
ಕಾಂಗ್ರೆಸ್‌
ಕಾಂಗ್ರೆಸ್‌   

ನವದೆಹಲಿ: ‘ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ತನಗೆ ಕಡಿಮೆ ಸ್ಥಾನಗಳು ದೊರೆತರೂ ಚಿಂತೆಯಿಲ್ಲ. ಆದರೆ ಸೋಲುವ ಕ್ಷೇತ್ರಗಳ ಕಸದ ತೊಟ್ಟಿಯಾಗಲು ತಾನು ಸಿದ್ಧವಿಲ್ಲ’ ಎಂದು ಮಿತ್ರಪಕ್ಷಗಳಿಗೆ ಸ್ಪಷ್ಟ ಸಂದೇಶ ಕಳುಹಿಸಿರುವ ಕಾಂಗ್ರೆಸ್‌, ‘ಸೀಟು ಹಂಚಿಕೆಯಲ್ಲಿ ಮಿಶ್ರಣ ಮತ್ತು ಸಮತೋಲನ ಕಾಯ್ದುಕೊಳ್ಳಬೇಕು’ ಎಂದು ಸಲಹೆ ನೀಡಿದೆ. 

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ ನಡೆಸುತ್ತಿರುವ ‘ಮತದಾರರ ಅಧಿಕಾರ ಯಾತ್ರೆ’ಯಿಂದ ಹಲವು ಹೊಸ ಪಕ್ಷಗಳು ಆಕರ್ಷಿತವಾಗಿವೆ. ಅಲ್ಲದೆ ಅವು ರಾಜ್ಯದಲ್ಲಿ ಆರ್‌ಜೆಡಿ ನೇತೃತ್ವದ ‘ಮಹಾಘಟಬಂಧನ್‌’ಗೆ ಸೇರುವ ತವಕದಲ್ಲಿವೆ. ಆದರೆ, ಐದು ವರ್ಷಗಳ ಹಿಂದೆ ಅವರು ಸ್ಪರ್ಧಿಸಿದ್ದ ಸ್ಥಾನಗಳನ್ನೇ ಈ ಬಾರಿಯೂ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಹೇಳಿದೆ.

ಎಲ್ಲ ಮಿತ್ರ ಪಕ್ಷಗಳು ಸೀಟುಗಳ ಹಂಚಿಕೆಯನ್ನು ಖಚಿತಪಡಿಸಿಕೊಳ್ಳುವಾಗ ಹೊರೆಯನ್ನು ಸಮಾನವಾಗಿ ಹಂಚಿಕೊಳ್ಳಬೇಕು. ಒಕ್ಕೂಟದಿಂದ ಗೆಲ್ಲಲು ಆಗದ ಸ್ಥಾನಗಳನ್ನು ದೊಡ್ಡ ಸಂಖ್ಯೆಯಲ್ಲಿ ತನಗಷ್ಟೇ ವಹಿಸುವುದು ಸರಿಯಲ್ಲ ಎಂದೂ ಕಾಂಗ್ರೆಸ್‌ ಹೇಳಿದೆ. 

ADVERTISEMENT

‘ಗೆಲ್ಲುವ ಸ್ಥಾನಗಳಂತೆಯೇ ಗೆಲ್ಲಲು ಕಷ್ಟವಿರುವ ಸ್ಥಾನಗಳ ಮೇಲೂ ಗಮನಹರಿಸಬೇಕು. ಎಲ್ಲ ಪಕ್ಷಗಳಿಗೂ ಸೀಟು ಹಂಚಿಕೆ ವೇಳೆ ಗೆಲ್ಲುವ ಮತ್ತು ಗೆಲ್ಲಲು ಕಷ್ಟವಿರುವ ಕ್ಷೇತ್ರಗಳನ್ನು ಹಂಚಬೇಕು. ಹೀಗೆ ಸೀಟು ಹಂಚಿಕೆಯು ಮಿಶ್ರಣ ಮತ್ತು ಸಮತೋಲನದಿಂದ ಕೂಡಿರಬೇಕು’ ಎಂದು ಬಿಹಾರದ ಕಾಂಗ್ರೆಸ್‌ ಉಸ್ತುವಾರಿ ಕೃಷ್ಣ ಅಲ್ಲವರು ಬುಧವಾರ ಪ್ರತಿಕ್ರಿಯಿಸಿದರು.

2020ರ ಚುನಾವಣೆಯಲ್ಲಿ ಕಾಂಗ್ರೆಸ್‌ ಸ್ಪರ್ಧಿಸಿದ್ದ 70 ಸ್ಥಾನಗಳ ಪೈಕಿ ಗೆಲುವು ಕಂಡಿದ್ದು 19ರಲ್ಲಿ ಮಾತ್ರ. ಅಂದರೆ ದಶಕದಿಂದ ಮೈತ್ರಿಕೂಟದ ಮಿತ್ರ ಪಕ್ಷಗಳು ಗೆಲ್ಲಲು ಸಾಧ್ಯವಾಗದ ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ನೀಡಲಾಗಿತ್ತು ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು. 

ಪಕ್ಷವು ಹೆಚ್ಚಿನ ಸಂಖ್ಯೆಯ ಸ್ಥಾನಗಳನ್ನು ಪಡೆಯುವ ಗುರಿ ಹೊಂದುವ ಬದಲು, ಗೆಲ್ಲಬಹುದಾದ ಕ್ಷೇತ್ರಗಳನ್ನು ಪಡೆಯಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು. ಈ ಬಾರಿ ಪಕ್ಷವು 57ರಿಂದ 60 ಸ್ಥಾನಗಳು ದೊರೆಯಬಹುದು ಎಂದು ಕಾಂಗ್ರೆಸ್‌ ಮೂಲಗಳು ಅಂದಾಜಿಸಿವೆ.

ಆದರೆ ಈ ಸೂತ್ರವನ್ನು ಇತರ ಪಕ್ಷಗಳು ಎಷ್ಟರ ಮಟ್ಟಿಗೆ ಒಪ್ಪುತ್ತವೆ ಎಂಬ ಪ್ರಶ್ನೆಯಿದೆ. ಕಳೆದ ಬಾರಿ 19 ಕ್ಷೇತ್ರಗಳಲ್ಲಿ ಸ್ಪರ್ಧಿಸಿ 12ರಲ್ಲಿ ಗೆದ್ದಿದ್ದ ಸಿಪಿಐ (ಎಂಎಲ್‌), ಈ ಬಾರಿ 40 ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ. 

ಬಿಹಾರ: ಎರಡು ಪ್ರಮುಖ ಯೋಜನೆಗೆಳಿಗೆ ಅನುಮೋದನೆ

ನವದೆಹಲಿ: ಚುನಾವಣೆ ಸಮೀಪಿಸುತ್ತಿರುವ ಬಿಹಾರಕ್ಕೆ ಸುಮಾರು ₹7500 ಕೋಟಿ ಮೊತ್ತದ ರಸ್ತೆ ಮತ್ತು ರೈಲ್ವೆಯ ಪ್ರಮುಖ ಯೋಜನೆಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯು (ಸಿಸಿಇಎ) ಈ ಮಹತ್ವದ ಮೂಲ ಸೌಕರ್ಯ ಯೋಜನೆಗಳಿಗೆ ಒಪ್ಪಿಗೆ ಕೊಟ್ಟಿದೆ. ಬಿಹಾರದ ಬಕ್ಸಾರ್‌– ಭಾಗಲ್ಪುರ ಹೈಸ್ಪೀಡ್‌ ಕಾರಿಡಾರ್‌ನ 4 ಪಥದ ಮೊಕಾಮಾ–ಮುಂಗೇರ್‌ ವಿಭಾಗದ ನಿರ್ಮಾಣಕ್ಕೆ ಒಟ್ಟು ₹4447.38 ಕೋಟಿ ಹಾಗೂ ಬಿಹಾರ ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳಕ್ಕೆ ಸಂಪರ್ಕಿಸುವ ಬಾಗಲ್ಪುರ– ದುಮ್ಕಾ–ರಾಮಪುರಹಾಟ್‌ ಏಕಪಥ ರೈಲು ಹಳಿ ಮಾರ್ಗದಲ್ಲಿ ದ್ವಿಪಥ ಹಳಿ ನಿರ್ಮಾಣ ಯೋಜನೆಯನ್ನು ₹3169 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಿಸಿಇಎ ಅನುಮೋದನೆ ನೀಡಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.