ADVERTISEMENT

ಬಿಹಾರ ಚುನಾವಣೆ: ಲಾರಿ ಚಾಲಕನ ಪುತ್ರಿ ಶ್ರೀಮಂತ ಅಭ್ಯರ್ಥಿ

ಜೆಡಿಯು ಅಭ್ಯರ್ಥಿ ಮನೋರಮಾ ದೇವಿ ಆಸ್ತಿ ಮೌಲ್ಯ ₹89 ಕೋಟಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2020, 19:30 IST
Last Updated 18 ಅಕ್ಟೋಬರ್ 2020, 19:30 IST
ತಮ್ಮ ತಂದೆ ರಾಮ್‌ವಿಲಾಸ್ ಪಾಸ್ವಾನ್ ನಿಧನದ ನಿಮಿತ್ತ ದಶಾಕರ್ಮ ಸಂಪ್ರದಾಯ ಪಾಲಿಸಿದ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ತಲೆಗೂದಲು ತೆಗೆಸಿಕೊಂಡರು–ಪಿಟಿಐ ಚಿತ್ರ
ತಮ್ಮ ತಂದೆ ರಾಮ್‌ವಿಲಾಸ್ ಪಾಸ್ವಾನ್ ನಿಧನದ ನಿಮಿತ್ತ ದಶಾಕರ್ಮ ಸಂಪ್ರದಾಯ ಪಾಲಿಸಿದ ಎಲ್‌ಜೆಪಿ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು ತಲೆಗೂದಲು ತೆಗೆಸಿಕೊಂಡರು–ಪಿಟಿಐ ಚಿತ್ರ   

ಪಟ್ನಾ: ಅಪ್ಪ ಟ್ರಕ್‌ ಚಾಲಕ, ಪತಿ ರಾಜಕಾರಣಿಯಾಗಿ ಪರಿವರ್ತನೆಗೊಂಡಿದ್ದ ರೌಡಿ, ಪುತ್ರ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೊಲೆಗಾರ... ಮನೋರಮಾ ದೇವಿ ಎಂಬ ಮಹಿಳೆಯ ಕುಟುಂಬದ ಸಂಕ್ಷಿಪ್ತ ಪರಿಚಯವಿದು. ಈ ಮಹಿಳೆ ಈಗ ಬಿಹಾರ ವಿಧಾನಸಭೆಗೆ ಗಯಾದ ಅತ್ರಿ ಕ್ಷೇತ್ರದಿಂದ ಜೆಡಿಯು ಅಭ್ಯರ್ಥಿಯಾಗಿದ್ದಾರೆ. ಇದೇ ಮೊದಲಬಾರಿಗೆ ಆಕೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.

ಈ ಮಹಿಳೆ ಸುದ್ದಿಯಾಗುವುದಕ್ಕೆ ಕುಟುಂಬದ ಹಿನ್ನೆಲೆಯಷ್ಟೇ ಕಾರಣವಲ್ಲ, ಈಕೆಯ ಕುಂಟುಂಬದ ಘೋಷಿತ ಆಸ್ತಿ ಮೌಲ್ಯ ₹ 89.77 ಕೋಟಿ ಎಂಬುದೂ ಹಲವರ ಹುಬ್ಬೇರುವಂತೆ ಮಾಡಿದೆ. ಬಿಹಾರದಲ್ಲಿ ಚುನಾವಣಾ ಕಣಕ್ಕಿಳಿದಿರುವ ಅತ್ಯಂತ ಶ್ರೀಮಂತ ಅಭ್ಯರ್ಥಿ ಇವರಾಗಿದ್ದಾರೆ.

ಮನೋರಮಾ ಅವರು ನಾಮಪತ್ರದೊಂದಿಗೆ ಸಲ್ಲಿಸಿದ್ದ ತಮ್ಮ ಆಸ್ತಿ ವಿವರದಲ್ಲಿ ₹ 53.19 ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ. ಪತಿಯ ಆಸ್ತಿಯೂ ಸೇರಿದರೆ ಒಟ್ಟಾರೆ ಇವರ ಕುಟುಂಬದ ಆಸ್ತಿ ಸುಮಾರು ₹ 89 ಕೋಟಿಯಷ್ಟಿದೆ. ಪತಿ ಬಿಂದಿ ಯಾದವ್‌ ಅವರು ಕೋವಿಡ್‌ನಿಂದಾಗಿ ಜುಲೈ ತಿಂಗಳಲ್ಲಿ ಮೃತಪಟ್ಟಿದ್ದಾರೆ.

ADVERTISEMENT

ಮನೋರಮಾ ಅವರ ತಂದೆ ಹಜಾರಾ ಸಿಂಗ್‌ ಅವರು ರಸ್ತೆ ಬದಿ ಢಾಬ ನಡೆಸುತ್ತಿದ್ದ ವ್ಯಕ್ತಿಯೊಬ್ಬರ ಪುತ್ರಿಯನ್ನು ವಿವಾಹವಾಗಿ, ಬಿಹಾರದಲ್ಲಿ ನೆಲೆಸಿದ್ದರು. 1970ರಲ್ಲಿ ಮನೋರಮಾದೇವಿ ಅವರ ಜನನವಾಗಿತ್ತು.

ಮನೋರಮಾ ಅವರು ಸುಮಾರು ಮೂರು ದಶಕಗಳ ಹಿಂದೆ ರೌಡಿ ಬಿಂದಿ ಯಾದವ್‌ ಅವರನ್ನು ವರಿಸಿದ್ದರು. ಆರಂಭದ ದಿನಗಳಲ್ಲಿ ಆರ್‌ಜೆಡಿ ಜತೆಗೆ ಸಖ್ಯ ಹೊಂದಿದ್ದ ಬಿಂದಿ, ಆ ನಂತರ ತಮ್ಮ ನಿಷ್ಠೆಯನ್ನು ಜೆಡಿಯು ಕಡೆಗೆ ಬದಲಿಸಿದ್ದರು. ಇವರ ಪುತ್ರ ರಾಕಿ, 2016ರಲ್ಲಿ ಆದಿತ್ಯ ಸಚ್‌ದೇವ್‌ ಎಂಬ ವಿದ್ಯಾರ್ಥಿಯನ್ನು ರಸ್ತೆಯಲ್ಲೇ ಕೊಲೆ ಮಾಡಿದ್ದ. ಪ್ರಸಕ್ತ ಆತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ಬಿಹಾರ ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದವರಲ್ಲಿ ಅತ್ಯಂತ ಬಡ ಅಭ್ಯರ್ಥಿ ಎಂದರೆ ಸುಲ್ತಾನ್‌ಗಂಜ್‌ ಕ್ಷೇತ್ರದಲ್ಲಿ ಸೋಷಲಿಸ್ಟ್‌ ಯುನಿಟಿ ಸೆಂಟರ್‌ ಆಫ್‌ ಇಂಡಿಯಾ –ಕಮ್ಯುನಿಸ್ಟ್‌ (ಎಸ್‌ಯುಸಿಐ–ಚಿ) ಪಕ್ಷದ ನರೇಶ್‌ ದಾಸ್‌. ಇವರ ಒಟ್ಟಾರೆ ಆಸ್ತಿ ಮೌಲ್ಯ ₹ 3,500 ಮಾತ್ರ.

ಆದಿತ್ಯನಾಥ ಪ್ರಚಾರ

ಲಖನೌ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಶೀಘ್ರದಲ್ಲೇ ನೆರೆ ರಾಜ್ಯ ಬಿಹಾರದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಇವರು ಬಿಹಾರದಲ್ಲಿ 20ಕ್ಕೂ ಹೆಚ್ಚು ರ್‍ಯಾಲಿಗಳನ್ನು ನಡೆಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಇವರ ರ್‍ಯಾಲಿಗಳು ಹೆಚ್ಚಾಗಿ ಉತ್ತರಪ್ರದೇಶ– ಬಿಹಾರ ಗಡಿಭಾಗದಲ್ಲಿರುವ ಕ್ಷೇತ್ರಗಳಲ್ಲೇ ನಡೆಯಲಿವೆ.

‘ಸಿವಾನ್‌, ಛಪ್ರ, ಗೋಪಾಲಗಂಜ್‌ ಹಾಗೂ ಇತರ ಕೆಲವು ಜಿಲ್ಲೆಗಳಲ್ಲಿ ಜನರು ಆದಿತ್ಯನಾಥ ಅವರನ್ನು ತುಂಬಾ ಗೌರವಿಸುತ್ತಾರೆ. ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಗೋರಖನಾಥ ಪೀಠದ ಅನುಯಾಯಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದಿತ್ಯನಾಥ ಅವರು ಈ ಪೀಠದ ಮಹಾಂತರಾಗಿದ್ದಾರೆ. ಇದಲ್ಲದೆ ಲಾಕ್‌ಡೌನ್‌ ಅವಧಿಯಲ್ಲಿ ಗುಜರಾತ್‌, ಮಹಾರಾಷ್ಟ್ರಗಳಿಂದ ಬಿಹಾರಕ್ಕೆ ಮರಳುತ್ತಿದ್ದ ವಲಸೆ ಕಾರ್ಮಿಕರಿಗೆ ಉತ್ತರಪ್ರದೇಶ ಸರ್ಕಾರ ನೆರವಿಗೆ ಬಂದಿತ್ತು. ಆದ್ದರಿಂದ ಆದಿತ್ಯನಾಥ ಅವರ ರ್‍ಯಾಲಿಗಳಿಂದ ಪಕ್ಷಕ್ಕೆ ಲಾಭವಾಗಲಿದೆ’ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.

‘ಮೈತ್ರಿ ಧರ್ಮದಿಂದಾಗಿ ಬಿಜೆಪಿ ಟೀಕೆ’

ಪಟ್ನಾ: ತಮ್ಮ ವಿರುದ್ಧ ಇತ್ತೀಚೆಗೆ ಬಿಜೆಪಿ ಮಾಡಿರುವ ಟೀಕೆಗಳನ್ನು ಸಕಾರಾತ್ಮಕವಾಗಿಯೇ ಸ್ವೀಕರಿಸಿರುವ ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರು, ‘ಜೆಡಿಯು ಜತೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿಯು ಟೀಕೆ ಮಾಡುವ ಮೂಲಕ ‘ಮೈತ್ರಿಧರ್ಮ’ ಪಾಲಿಸುತ್ತಿದೆ’ ಎಂದು ಹೇಳಿದ್ದಾರೆ.

‘ಪ್ರಧಾನಿ ಅವರ ಜತೆಗಿನ ಸಂಬಂಧವನ್ನು ನಾನು ತೋರ್ಪಡಿಸಿಕೊಳ್ಳುವ ಅಗತ್ಯವಿಲ್ಲ. ನನ್ನ ತಂದೆ ಆಸ್ಪತ್ರೆಗೆ ದಾಖಲಾದ ದಿನದಿಂದ ಹಿಡಿದು, ಅವರು ಕೊನೆಯುಸಿರು ಎಳೆಯುವವರೆಗೆ ಪ್ರಧಾನಿ ನನ್ನ ಜೊತೆಗಿದ್ದರು’ ಎಂದು ಸರಣಿ ಟ್ವೀಟ್‌ಗಳಲ್ಲಿ ಅವರು ವಿವರಿಸಿದ್ದಾರೆ.‘ನನ್ನ ಕಾರಣಕ್ಕೆ ಪ್ರಧಾನಿ ಮೋದಿ ಅವರು ಯಾವುದೇ ಗೊಂದಲಕ್ಕೆ ಬೀಳುವುದು ನನಗೆ ಇಷ್ಟವಿಲ್ಲ. ಅವರು ಮೈತ್ರಿಧರ್ಮವನ್ನು ಪಾಲಿಸಲೇಬೇಕು.ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತೃಪ್ತಿಪಡಿಸುವುದಕ್ಕಾಗಿ ನನ್ನ ವಿರುದ್ಧ ಏನು ಬೇಕಾದರೂ ಹೇಳಬಹುದು’ ಎಂದು ಚಿರಾಗ್‌ ಹೇಳಿದ್ದಾರೆ.

ಜೆಡಿಯು ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಗಳನ್ನು ಕಣಕ್ಕಿಳಿಸಿರುವ ಎಲ್‌ಜೆಪಿ, ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸುತ್ತಿಲ್ಲ. ಚುನಾವಣೆ ಬಳಿಕ ಬಿಜೆಪಿ, ಎಲ್‌ಜೆಪಿ ಸೇರಿ ಸರ್ಕಾರ ರಚಿಸಲಿವೆ ಎಂದು ಚಿರಾಗ್‌ ಈ ಮೊದಲು ಹೇಳಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.