ADVERTISEMENT

ಬಿಹಾರ ವಿಧಾನಸಭಾ ಚುನಾವಣೆ: ಎನ್‌ಡಿಎ ಸೀಟು ಹಂಚಿಕೆ ಸೂತ್ರ ಘೋಷಣೆ ಇಂದು

ಪಿಟಿಐ
Published 11 ಅಕ್ಟೋಬರ್ 2025, 23:30 IST
Last Updated 11 ಅಕ್ಟೋಬರ್ 2025, 23:30 IST
   

ನವದೆಹಲಿ: ಬಿಹಾರದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ನೇತೃತ್ವದಲ್ಲಿ ಮೈತ್ರಿಕೂಟದ ನಾಯಕರ ಜೊತೆ ಶನಿವಾರ ಸಭೆ ನಡೆಸಿದರು.

‘ಎನ್‌ಡಿಎ ಮಿತ್ರಕೂಟದ ಜೊತೆ ಸೀಟು ಹಂಚಿಕೆ ಸಂಬಂಧಿಸಿದಂತೆ ಭಾನುವಾರ ಘೋಷಣೆ ಮಾಡಲಾಗುವುದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಜೈಸ್ವಾಲ್‌ ತಿಳಿಸಿದ್ದಾರೆ. 

ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯ ಒಂದು ದಿನಕ್ಕೂ ಮುಂಚಿತವಾಗಿ ಈ ಸಭೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ, ಪಕ್ಷದ ಇತರೆ ಹಿರಿಯ ನಾಯಕರು ಸೇರಿ, ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲಿದ್ದಾರೆ. ಇದೇ ನವೆಂಬರ್‌ 6 ಹಾಗೂ 11 ರಂದು ರಾಜ್ಯ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

ADVERTISEMENT

ಸಂಯುಕ್ತ ಜನತಾದಳ, ಎಲ್‌ಜೆಪಿ (ರಾಮ್‌ವಿಲಾಸ್‌ ಪಾಸ್ವಾನ್‌)ಗೆ ಸೀಟು ಹಂಚಿಕೆ ವಿಚಾರವೂ ಅಂತಿಮಗೊಂಡಿದೆ. ಆದರೆ, ಮಿತ್ರಪಕ್ಷಗಳಾದ ಹಿಂದೂಸ್ತಾನ್‌ ಅವಾಮ್‌ ಮೋರ್ಚಾ(ಜಾತ್ಯತೀತ) ಮುಖ್ಯಸ್ಥ ಜಿತನ್‌ ರಾಮ್‌ ಮಾಂಝಿ ಹಾಗೂ ರಾಷ್ಟ್ರೀಯ ಲೋಕ್‌ ಮೋರ್ಚಾ (ಆರ್‌ಎಲ್‌ಎಂ)ನ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಅವರು ಹೆಚ್ಚಿನ ಕ್ಷೇತ್ರಗಳಿಗೆ ಪಟ್ಟು ಮುಂದುವರಿಸಿದ್ದಾರೆ.

ಮೂಲಗಳ ಪ್ರಕಾರ, ಸಂಯುಕ್ತ ಜನತಾದಳ 101–102 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಬಿಜೆಪಿ 100 ಕ್ಷೇತ್ರಗಳಿಂದ ಕಣಕ್ಕಿಳಿಯುವ ನಿರೀಕ್ಷೆಯಿದೆ. 

‘ಎನ್‌ಡಿಎ ಮಿತ್ರಕೂಟದಲ್ಲಿ ಎಲ್ಲವೂ ಸರಿಯಾಗಿದೆ. ಸೀಟು ಹಂಚಿಕೆಯನ್ನು ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಕಟಿಸಲಾಗುವುದು. ಮಿತ್ರಕೂಟವು ಒಗ್ಗಟ್ಟಿನಲ್ಲಿದೆ’ ಎಂದು ಸಭೆಯ ಬಳಿಕ  ದಿಲೀಪ್‌ ಜೈಸ್ವಾಲ್ ತಿಳಿಸಿದರು.

ಸಭೆಯಲ್ಲಿ ಬಿಜೆಪಿಯ ರಾಜಕೀಯ ವ್ಯವಹಾರಗಳ ಮುಖ್ಯಸ್ಥ ವಿನೋದ್‌ ತಾವ್ಡೆ, ಬಿಜೆಪಿಯ ಬಿಹಾರ ಉಸ್ತುವಾರಿ ಧರ್ಮೇಂದ್ರ ಪ್ರಧಾನ್‌, ಬಿಹಾರದ ಉಪಮುಖ್ಯಮಂತ್ರಿ ಸಮರ್ಥ್‌ ಚೌಧರಿ ಅವರು ಸಭೆಯಲ್ಲಿ ಭಾಗವಹಿಸಿ ವಿಸ್ತೃತವಾಗಿ ಚರ್ಚೆ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.