ADVERTISEMENT

ಮತದಾರರ ಪಟ್ಟಿ ಪರಿಷ್ಕರಣೆ: ಬಿಹಾರದಲ್ಲಿ 12,817 ಹೊಸ ಮತಗಟ್ಟೆ ಸ್ಥಾಪನೆ

ಪಿಟಿಐ
Published 20 ಜುಲೈ 2025, 13:14 IST
Last Updated 20 ಜುಲೈ 2025, 13:14 IST
   

ಪಟ್ನಾ: ‘ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್‌) ಭಾಗವಾಗಿ ಚುನಾವಣಾ ಆಯೋಗದ ಶಿಫಾರಸಿನ ಆಧಾರದಲ್ಲಿ ರಾಜ್ಯದಲ್ಲಿ 12,817 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ’ ಎಂದು ಬಿಹಾರ ಸರ್ಕಾರ ಹೇಳಿದೆ.

ಈವರೆಗೆ ಬಿಹಾರದಲ್ಲಿ 77,895 ಮತಗಟ್ಟೆಗಳಿದ್ದವು. 12,817 ಪೈಕಿ 12,479 ಮತಗಟ್ಟೆಗಳನ್ನು ಈಗಾಗಲೇ ಇರುವ ಮತಗಟ್ಟೆಗಳ ಕಟ್ಟಡ ಆವರಣದಲ್ಲಿ ಅಥವಾ ಅದೇ ಕಟ್ಟಡದಲ್ಲಿಯೇ ಸ್ಥಾಪಿಸಲಾಗಿದೆ. ಉಳಿದ 338 ಮತಗಟ್ಟೆಗಳನ್ನು ಈಗಾಗಲೇ ಇರುವ ಮತಗಟ್ಟೆಗಳ ಸಮೀಪದಲ್ಲಿ ಸ್ಥಾಪಿಸಲಾಗಿದೆ.

ಹೊಸ ಮತಗಟ್ಟೆಗಳ ಮಾಹಿತಿ ಕುರಿತ ಜಿಲ್ಲಾವಾರು ಪಟ್ಟಿಯನ್ನು ಆಯೋಗವು ಎಲ್ಲ ಪಕ್ಷಗಳೊಂದಿಗೆ ಹಂಚಿಕೊಂಡಿದೆ. ಪರಿಷ್ಕರಣೆ ಭಾಗವಾಗಿ 7.9 ಕೋಟಿ ಮತದಾರರು ನೋಂದಣಿಯಾಗಿದ್ದಾರೆ. ‘ತಮ್ಮ ವಿಳಾಸದಲ್ಲಿ ಸಿಗದ’ ಮತ್ತು ಮೃತಪಟ್ಟ ಜನರ ಸಂಖ್ಯೆಯು 41.64 ಲಕ್ಷ ತಲುಪಿದೆ.

ADVERTISEMENT

ಮುಕ್ಕಾಲು ಪರಿಷ್ಕರಣೆ ಪೂರ್ಣಗೊಂಡ ಬಳಿಕ ಹೊಸ ಮತಗಟ್ಟೆ

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕುರಿತು ಚುನಾವಣಾ ಆಯೋಗವು ಜೂನ್‌ 25ರಂದು ಆದೇಶ ಹೊರಡಿಸಿತ್ತು. ಹೊಸ ಮತಗಟ್ಟೆಗಳ ಸ್ಥಾಪನೆ ಕುರಿತು ಈ ಆದೇಶದಲ್ಲಿಯೇ ಉಲ್ಲೇಖಿಸಲಾಗಿತ್ತು. ‘ಯಾವುದೇ ಮತಗಟ್ಟೆಯೂ 1200 ಮತದಾರರನ್ನು ಮೀರಬಾರದು. ಒಂದು ವೇಳೆ 1200 ಮತದಾರರಿಗಿಂತ ಹೆಚ್ಚಿನ ಮತದಾರರು ಒಂದೇ ಮತಗಟ್ಟೆ ವ್ಯಾಪ್ತಿಯಲ್ಲಿದ್ದರೆ ಹೊಸ ಮತಗಟ್ಟೆ ಸ್ಥಾಪಿಸಬೇಕು. ಒಂದು ವೇಳೆ ಆಯೋಗದ ಪೂರ್ವಾನುಮತಿ ಇದ್ದರೆ ಹೊಸ ಮತಗಟ್ಟೆ ಸ್ಥಾಪನೆ ಬೇಡ’ ಎಂದು ಆದೇಶದಲ್ಲಿ ಹೇಳಲಾಗಿತ್ತು. ಶೇ 95.92ರಷ್ಟು ಪರಿಷ್ಕರಣೆ ಪೂರ್ಣಗೊಂಡಿದೆ ಎಂದು ಆಯೋಗ ಹೇಳಿದೆ. ಹೊಸ ಮತಗಟ್ಟೆ ಸ್ಥಾಪನೆಗೆ ನೀಡಿದ್ದ ಕಾಲಾವಕಾಶ ಇನ್ನು ಆರು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಈ ಹಂತದಲ್ಲಿ ಬಿಹಾರ ಸರ್ಕಾರವು ಹೊಸ ಮತಗಟ್ಟೆಗಳನ್ನು ಸ್ಥಾಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.