ನವದೆಹಲಿ: ಚುನಾವಣಾ ಕಣದಲ್ಲಿ ಪಕ್ಷದ ಅಭ್ಯರ್ಥಿಯ ವಿರುದ್ಧ ಪಕ್ಷದ ದಂಡನಾಯಕರೇ ಪ್ರಚಾರ ನಡೆಸುವ ಪ್ರಸಂಗ ಅತಿ ಅಪರೂಪ. ಬಿಹಾರ ವಿಧಾನಸಭಾ ಚುನಾವಣಾ ಕಣದಲ್ಲಿ ಇಂತಹುದೇ ಒಂದು ಸನ್ನಿವೇಶ ಸೃಷ್ಟಿಯಾಗಿದೆ. ಆರ್‌ಜೆಡಿಯ ಅಧಿಕೃತ ಅಭ್ಯರ್ಥಿಯ ವಿರುದ್ಧವೇ ಪಕ್ಷದ ಮಹಾನಾಯಕರು ಮತ ಕೇಳಲಿದ್ದಾರೆ.
‘ಮಹಾಘಟಬಂಧನ್’ನೊಳಗಿನ ಗೊಂದಲ ಮತ್ತು ಭಿನ್ನಾಭಿಪ್ರಾಯಗಳು ದರ್ಭಾಂಗಾ ಜಿಲ್ಲೆಯ ಗೌರ ಬೌರಂ ಕ್ಷೇತ್ರದಲ್ಲಿ ವಿಚಿತ್ರ ಪರಿಸ್ಥಿತಿಗೆ ಕಾರಣವಾಗಿದೆ. ‘ಮಹಾಘಟಬಂಧನ್‘ ಪಾಲುದಾರರು ಸೀಟು ಹಂಚಿಕೆಯ ಸಮಯದಲ್ಲಿ ಒಮ್ಮತಕ್ಕೆ ಬರಲು ಹೆಣಗಾಡಿದರು ಮತ್ತು ಕೆಲವೊಂದು ಭಿನ್ನಾಭಿಪ್ರಾಯಗಳನ್ನು ಕೊನೆಯವರೆಗೂ ಪರಿಹರಿಸಲು ಸಾಧ್ಯವಾಗಲಿಲ್ಲ. ಈ ಕಾರಣದಿಂದಾಗಿ, ಒಂಬತ್ತು ಕ್ಷೇತ್ರಗಳಲ್ಲಿ ಮಿತ್ರಪಕ್ಷಗಳು ಪರಸ್ಪರ ಸೆಣಸುತ್ತಿವೆ. ಗೌರ ಬೌರಂ ಕ್ಷೇತ್ರದಲ್ಲಿ ‘ಮಿತ್ರರ ಕಾದಾಟ’ ಅಂಕೆ ಮೀರಿ ಹೋಗಿದೆ.
ಏನಿದು ವಿವಾದ:
ಮಿತ್ರ ಪಕ್ಷಗಳ ಜತೆಗೆ ಸೀಟು ಹಂಚಿಕೆ ಅಂತಿಮಗೊಳ್ಳುವ ಮುನ್ನವೇ ಈ ಕ್ಷೇತ್ರದಲ್ಲಿ ಅಫ್ಜಲ್ ಅಲಿ ಖಾನ್ ಅವರನ್ನು ಕಣಕ್ಕಿಳಿಸಲು ಆರ್‌ಜೆಡಿ ತೀರ್ಮಾನಿಸಿತು. ಪಕ್ಷದ ನಾಯಕತ್ವವು ಅಫ್ಜಲ್‌ಗೆ ಬಿ–ಫಾರಂ ನೀಡಿತು. ಅಫ್ಜಲ್ ಅವರು ಟಿಕೆಟ್ ಸಿಕ್ಕ ಖುಷಿಯನ್ನು ಆಪ್ತರೊಂದಿಗೆ ಹಂಚಿಕೊಂಡು ಪ್ರಚಾರಕ್ಕೆ ಸಜ್ಜಾಗುವಂತೆ ಸೂಚಿಸಿದರು.
ಪಟ್ನಾದಿಂದ ಅವರ ಕ್ಷೇತ್ರಕ್ಕೆ ಸುಮಾರು ನಾಲ್ಕು ಗಂಟೆಗಳ ಪ್ರಯಾಣ. ಅವರು ಕ್ಷೇತ್ರ ತಲುಪುವ ಮೊದಲೇ ಆರ್‌ಜೆಡಿ ಹಾಗೂ ಮುಕೇಶ್ ಸಹಾನಿ ಅವರ ವಿಕಾಸ್‌ಶೀಲ ಇನ್ಸಾನ್ ಪಾರ್ಟಿ (ವಿಐಪಿ) ನಡುವೆ ಒಪ್ಪಂದ ಏರ್ಪಟಿತು. ಈ ಕ್ಷೇತ್ರವನ್ನು ವಿಐಪಿಗೆ ಬಿಟ್ಟುಕೊಡಲು ಆರ್‌ಜೆಡಿ ಒಪ್ಪಿಗೆ ಮುದ್ರೆ ಒತ್ತಿತ್ತು. 2020ರಲ್ಲಿ ತಮ್ಮ ಪಕ್ಷ ಗೆದ್ದಿದ್ದ ಈ ಕ್ಷೇತ್ರದಲ್ಲಿ ಕಿರಿಯ ಸಹೋದರ ಸಂತೋಷ್ ಸಹಾನಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದರು. ಸಹೋದರನನ್ನು ಗೆಲ್ಲಿಸಿಕೊಂಡು ಬರಲು ಆರ್‌ಜೆಡಿ ನಾಯಕರು ಸಂಪೂರ್ಣ ಸಹಕಾರ ನೀಡಬೇಕು ಎಂದೂ ಷರತ್ತು ಒಡ್ಡಿದರು. ಇದಕ್ಕೆ ಆರ್‌ಜೆಡಿ ನಾಯಕರು ತಲೆಯಾಡಿಸಿದರು.
ಅಫ್ಜಲ್ ಅವರನ್ನು ಆರ್‌ಜೆಡಿ ನಾಯಕರು ಸಂಪರ್ಕಿಸಿ ಬಿ–ಫಾರಂ ಹಿಂತಿರುಗಿಸುವಂತೆ ಕೋರಿದರು. ಅದಕ್ಕೆ ಅವರು ಒಪ್ಪಲಿಲ್ಲ. ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರವನ್ನೂ ಸಲ್ಲಿಸಿದರು. ಅಫ್ಜಲ್ ಅವರ ಉಮೇದುವಾರಿಕೆಯನ್ನು ಪಕ್ಷವು ಅನುಮೋದಿಸುವುದಿಲ್ಲ ಎಂದು ಆರ್‌ಜೆಡಿ ನಾಯಕರು ಚುನಾವಣಾ ಅಧಿಕಾರಿಗಳಿಗೆ ಪತ್ರ ನೀಡಿದರು. ಅಫ್ಜಲ್ ಸೂಕ್ತ ದಾಖಲೆಗಳೊಂದಿಗೆ ನಾಮಪತ್ರ ಸಲ್ಲಿಸಿರುವುದರಿಂದ ಅವರ ಅಭ್ಯರ್ಥಿತನವನ್ನು ಅಸಿಂಧುಗೊಳಿಸಲು ಸಾಧ್ಯವಿಲ್ಲ ಎಂದು ಚುನಾವಣಾ ಅಧಿಕಾರಿಗಳು ಸ್ಪಷ್ಟಪಡಿಸಿದರು. ಇದರಿಂದಾಗಿ, ಕ್ಷೇತ್ರದಲ್ಲಿ ಆರ್‌ಜೆಡಿ–ವಿಐಪಿ ಹೋರಾಟಕ್ಕೆ ವೇದಿಕೆ ಅಣಿಯಾಗಿದೆ. ಕೊಟ್ಟ ಮಾತಿನಂತೆ ಆರ್‌ಜೆಡಿ ದಂಡನಾಯಕ ತೇಜಸ್ವಿ ಯಾದವ್ ಅವರು ಪಕ್ಷದ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಬೇಕಿದೆ.
ಅಫ್ಜಲ್ ನಾಮಪತ್ರ ವಜಾಗೊಳಿಸದ ಕ್ಷೇತ್ರದ ಚುನಾವಣಾ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್‌ಗೆ ಮೊರೆ ಹೋಗುವುದಾಗಿ ಸಂತೋಷ್ ಸಹಾನಿ ಘೋಷಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.