ದೀಪಂಕರ್ ಭಟ್ಟಾಚಾರ್ಯ
–ಪಿಟಿಐ ಚಿತ್ರ
ನವದೆಹಲಿ: ಬಿಹಾರ ಚುನಾವಣೆಯಲ್ಲಿ ಮಹಾಘಟಬಂಧನ ಗೆದ್ದರೆ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಬಿಹಾರದ ಮುಖ್ಯಮಂತ್ರಿಯಾಗುತ್ತಾರೆ ಎಂದು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದ–ಲೆನಿನ್‌ವಾದ) ಲಿಬರೇಶನ್‌ನ ಪ್ರಧಾನ ಕಾರ್ಯದರ್ಶಿ ದೀಪಂಕರ್ ಭಟ್ಟಾಚಾರ್ಯ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಕಳೆದ ಬಿಹಾರ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 19 ಸ್ಥಾನಗಳಲ್ಲಿ 12 ಸ್ಥಾನಗಳನ್ನು ಗೆದ್ದಿದ್ದ ತಮ್ಮ ಪಕ್ಷವು ಈ ಬಾರಿ 40-45 ಸ್ಥಾನಗಳಲ್ಲಿ ಸ್ಪರ್ಧಿಸಲು ತಳಮಟ್ಟದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಸಿಪಿಐ(ಎಂಎಲ್) ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ(ಎಂಎಲ್)ಗೆ ಹೆಚ್ಚಿನ ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರೆ, ಮಹಾಘಟಬಂಧನ್ ಅಧಿಕಾರದಲ್ಲಿರುತ್ತಿತ್ತು ಎಂಬ ಭಾವನೆ ಇದೆ. ಕಾಂಗ್ರೆಸ್ 70 ಸ್ಥಾನಗಳಲ್ಲಿ ಸ್ಪರ್ಧಿಸಲು ಅವಕಾಶ ಪಡೆದಿತ್ತು, ಆದರೆ ಅದು ಕೇವಲ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ನಾವು 19 ರಲ್ಲಿ 12 ಸ್ಥಾನಗಳನ್ನು ಗೆದ್ದೆವು. ಲೋಕಸಭಾ ಚುನಾವಣೆಯಲ್ಲಿ, ನಮಗೆ ಮೂರು ಸ್ಥಾನಗಳು ಸಿಕ್ಕವು, ನಾವು ಎರಡಲ್ಲಿ ಗೆದ್ದೆವು’ ಎಂದಿದ್ದಾರೆ.
ಸಿಪಿಐ(ಎಂಎಲ್) ಪ್ರಬಲ ಅಸ್ತಿತ್ವವನ್ನು ಹೊಂದಿದ್ದ ಪ್ರದೇಶಗಳಲ್ಲಿ, ಆರ್‌ಜೆಡಿ ಮತ್ತು ಕಾಂಗ್ರೆಸ್ ಕೂಡ ಉತ್ತಮ ಪ್ರದರ್ಶನ ನೀಡಿವೆ ಎಂದು ಹೇಳಿದ್ದಾರೆ.
‘ಕಳೆದ ಬಾರಿ ನಾವು ಕೇವಲ 12 ಸ್ಥಾನಗಳಲ್ಲಿ ಮಾತ್ರ ಸ್ಪರ್ಧಿಸಿದ್ದೆವು. ಈಗ ಸಿಪಿಐ(ಎಂಎಲ್) 24-25 ಜಿಲ್ಲೆಗಳಲ್ಲಿ ಪ್ರಬಲ ಅಸ್ತಿತ್ವವನ್ನು ಹೊಂದಿದೆ ಎಂದು ನಾವು ನಂಬುತ್ತೇವೆ. ನಾವು ಈ ಸ್ಥಾನಗಳಲ್ಲಿ ಸ್ಪರ್ಧಿಸಿದರೆ, ಅದು ಫಲಿತಾಂಶದಲ್ಲಿ ವ್ಯತ್ಯಾಸವನ್ನುಂಟು ಮಾಡುತ್ತದೆ. ಈ ಬಾರಿ ನಾವು ಹೆಚ್ಚಿನ ಸೀಟು ಪಡೆಯುವ ನಿರೀಕ್ಷೆಯಲ್ಲಿದ್ದೇವೆ’ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.
ಕಾಂಗ್ರೆಸ್‌ನಷ್ಟೇ ಸ್ಥಾನಗಳನ್ನು ನೀವು ನಿರೀಕ್ಷಿಸುತ್ತೀರಾ ಎನ್ನುವ ಪ್ರಶ್ನೆಗೆ, ‘ಬಿಹಾರದಲ್ಲಿ ಕಾಂಗ್ರೆಸ್ ಬಲಿಷ್ಠವಾಗಿಲ್ಲ ಎಂದು ಎಲ್ಲರಿಗೂ ತಿಳಿದಿದೆ. ಆದರೆ ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಮತ್ತು ದೇಶದ ಪ್ರಮುಖ ವಿರೋಧ ಪಕ್ಷ. ಸಿಪಿಐ(ಎಂಎಲ್) ಬಿಹಾರದಲ್ಲಿ ತನ್ನ ತಳಮಟ್ಟದ ಸಂಘಟನೆಗೆ ಹೆಸರುವಾಸಿಯಾಗಿದೆ. ಮಹಾಘಟಬಂಧನ್‌ನಲ್ಲಿರುವ ಎಲ್ಲಾ ಪಕ್ಷಗಳ ಬಲವನ್ನು ಸರಿಯಾಗಿ ಬಳಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ’ ಎಂದರು.
ವಿಧಾನಸಭಾ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸಬೇಕೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಘೋಷಿಸಿದರೂ ಇಲ್ಲದಿದ್ದರೂ ಯಾವುದೇ ವ್ಯತ್ಯಾಸವಿಲ್ಲ. ಮಹಾಘಟಬಂಧನ ಚುನಾವಣೆಯಲ್ಲಿ ಗೆದ್ದರೆ, ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗುತ್ತಾರೆ ಎಂದು ಒತ್ತಿ ಹೇಳಿದ್ದಾರೆ.
ನಿತೀಶ್ ಕುಮಾರ್ ಬಹುಶಃ ಎನ್‌ಡಿಎ ಮೈತ್ರಿಕೂಟದ ಮುಖವಾಗಬಹುದು. ನಿತೀಶ್ ಬಿಜೆಪಿಗೆ ಅನಿವಾರ್ಯ ಎಂದು ಅವರು ತಿಳಿಸಿದ್ದಾರೆ.
‘ಕಿಶೋರ್ ಬಿಜೆಪಿಯ ಬಿ ಟೀಮ್‌ನಂತೆ ಕೆಲಸ ಮಾಡುತ್ತಿದ್ದಾರೆ. ಜನರು ಈಗ ಅವರ ಬಗ್ಗೆ ಹಿಂದಿನಂತೆ ಉತ್ಸಾಹ ತೋರಿಸುತ್ತಿಲ್ಲ ಎಂದು ಪ್ರಶಾಂತ್ ಕಿಶೋರ್ ಮತ್ತು ಅವರ ಜನ ಸುರಾಜ್ ಪಕ್ಷದ ಬಗ್ಗೆ ಕೇಳಿದಾಗ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.